ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ತರಬೇತಿ ಕಾರ್ಯಾಗಾರದಲ್ಲಿ ತರಬೇತುದಾರರು ನೀಡಿದ ತರಬೇತಿಯನ್ನು ಚಾಚೂ ತಪ್ಪದೆ ಅನುಸರಿಸಿ ಕ್ರೀಡೆಯಲ್ಲಿ ತೊಡಗಿದಲ್ಲಿ ಜಯ ನಿಶ್ಚಿತ. ಕರ್ನಾಟಕ ತಂಡದಿಂದ ಭಾಗವಹಿಸುತ್ತಿರುವ ತಾವು ಎಲ್ಲರೂ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ರಾಜ್ಯದ ಕೀರ್ತಿಪತಾಕೆ ಹಾರಿಸಿ ಎಂದು ಶ್ರೀ ಅಭಿನವ ಅನ್ನದಾನೇಶ್ವರ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯೆ ಅನಸೂಯಾ ಪಾಟೀಲ ಹಾರೈಸಿದರು.
ಇಲ್ಲಿನ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಮೈದಾನದಲ್ಲಿ ಚೈತನ್ಯ ಕ್ರೀಡಾ ಸಂಸ್ಥೆಯ ಹಮ್ಮಿಕೊಂಡಿದ್ದ ಕರ್ನಾಟಕ ತಂಡದ ಸಬ್ ಜ್ಯೂನಿಯರ್ ಬಾಲಕಿಯರ ಅಟ್ಯಾಪಟ್ಯಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿದರು.
ಸ್ಥಳೀಯ ಚೈತನ್ಯ ಕ್ರೀಡಾ ಸಂಸ್ಥೆ ಯಾವುದೇ ಫಲಾಫೇಕ್ಷೆ ಇಲ್ಲದೇ ಹಲವಾರು ವರ್ಷಗಳಿಂದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳ ತರಬೇತಿ ನೀಡುತ್ತಾ ಬಂದಿದ್ದು, ಊಟ ವಸತಿಯೊಂದಿಗೆ ಪ್ರತಿ ಮಕ್ಕಳನ್ನೂ ತಮ್ಮ ಮಕ್ಕಳಂತೆ ಲಾಲನೆ-ಪಾಲನೆ ಮಾಡುವ ಮೂಲಕ ಸಂಸ್ಥೆ ಘನತೆಯನ್ನು ಕಾಯ್ದುಕೊಂಡು ಬಂದಿದೆ ಎಂದರು.ರೋಣ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್ಲ, ಚೈತನ್ಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ನಿಂಗರಾಜ ಬೇವಿನಕಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಂಸಿಎಸ್ ಶಾಲೆಯ ಮುಖ್ಯೋಪಾಧ್ಯಾಯೆ ಲಲಿತಾ ಕಲಾಲಬಂಡಿ, ತರಬೇತುದಾರ ಶಿಕ್ಷಕ ವಿ.ಎ. ಕುಂಬಾರ, ಸಂಸ್ಥೆಯ ಕಾರ್ಯದರ್ಶಿ ಸಂತೋಷ ಯಳಮಲಿ, ಪ್ರವೀಣ ಘಂಟಿ, ಜ್ಯೋತಿ ಪೂಜಾರ, ಅನಿತಾ ಮಾದರ, ಜ್ಯೋತಿ ಬೆಳವಟಗಿ, ಪ್ರೀತಿ ಬುಳ್ಳಾ, ಸುರೇಖಾ ಕೊಂಡಿ, ವೀರೇಶ ಕುರಿ ಸೇರಿದಂತೆ ಕ್ರೀಡಾಪ್ರೇಮಿಗಳು ಭಾಗವಹಿಸಿದ್ದರು.



