HomeKarnataka Newsಮತದಾನದ ಹಕ್ಕು ಕಾಯೋದು ಆಯೋಗದ ಕರ್ತವ್ಯ, ಕಸಿಯುವುದಲ್ಲ: ಡಿ.ಕೆ. ಶಿವಕುಮಾರ್

ಮತದಾನದ ಹಕ್ಕು ಕಾಯೋದು ಆಯೋಗದ ಕರ್ತವ್ಯ, ಕಸಿಯುವುದಲ್ಲ: ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: “ಆಳಂದ ಕ್ಷೇತ್ರದ ಮತ ಅಕ್ರಮದ ಬಗ್ಗೆ ಸಿಐಡಿ ತನಿಖೆಗೆ ಚುನಾವಣಾ ಆಯೋಗ ಸಹಕಾರ ನೀಡದಿರುವುದನ್ನು ನೋಡಿದರೆ, ಅವರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆಂಬ ಅನುಮಾನ ಸಹಜವಾಗಿ ಮೂಡುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಶಿವಕುಮಾರ್ ಅವರು ಗುರುವಾರ ಮಾತನಾಡಿದರು.

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿರುವ ಬಗ್ಗೆ ನವದೆಹಲಿಯಲ್ಲಿ ರಾಹುಲ್ ಗಾಂಧಿ ಅವರು ಮಾಧ್ಯಮಗೋಷ್ಠಿ ನಡೆಸಿರುವ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಅವರು ಈ ಬಗ್ಗೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಪಡೆದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಕೇವಲ ಆಳಂದ ವಿಧಾನಸಭಾ ಕ್ಷೇತ್ರ ಮಾತ್ರವಲ್ಲ, ಬೇರೆ ಕ್ಷೇತ್ರಗಳಲ್ಲೂ ಈ ರೀತಿ ಅಕ್ರಮಗಳು ನಡೆದಿವೆ” ಎಂದು ಆರೋಪಿಸಿದರು.

“ಸುಮಾರು 6 ಸಾವಿರ ಮತಗಳನ್ನು ತೆಗೆದು ಹಾಕಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹಾಗೂ ಆಳಂದ ಶಾಸಕರು ದೂರು ನೀಡಿದ್ದರು. ಈ ಕುರಿತು ಪ್ರಕರಣವೂ ದಾಖಲಾಯಿತು. ಈ ಮಧ್ಯೆ ಚಿಲುಮೆ ಸಂಸ್ಥೆ ಅಕ್ರಮದ ವಿಚಾರವಾಗಿ ನಾವು ಹೋರಾಟ ಮಾಡಿ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದೆವು. ಆಳಂದ ಕ್ಷೇತ್ರದ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆರಂಭಿಸಿ ಚುನಾವಣಾ ಆಯೋಗದಿಂದ ಮಾಹಿತಿ ಕೇಳಿತ್ತು. ಆದರೆ ಆಯೋಗವು ತನಿಖೆಗೆ ಸಹಕಾರ ನೀಡಲಿಲ್ಲ” ಎಂದು ತಿಳಿಸಿದರು.

“ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತಹ ಪರಿಶಿಷ್ಟರು, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲ ಜನ ಸಾಮಾನ್ಯರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಗಡಿ ಭಾಗದಲ್ಲಿರುವ ಬೇರೆ ರಾಜ್ಯದವರ ಹೆಸರನ್ನು ಸೇರಿಸಲಾಗಿತ್ತು. ಒಟ್ಟಾರೆ ಇದೆಲ್ಲವನ್ನೂ ಪೂರ್ವ ನಿಯೋಜಿತವಾಗಿ ಮಾಡಲಾಗಿತ್ತು. ಹೀಗಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಅವರು ಮಾಡಿರುವ ಆರೋಪಗಳೆಲ್ಲವೂ ನಿಜ” ಎಂದು ತಿಳಿಸಿದರು.

ಮತದಾನದ ಹಕ್ಕು ಕಾಯುವುದು ಆಯೋಗದ ಕರ್ತವ್ಯ, ಕಸಿಯುವುದಲ್ಲ

ಕೇಂದ್ರ ಸರ್ಕಾರದ ಜೊತೆ ಕೇಂದ್ರ ಚುನಾವಣಾ ಆಯೋಗ ಷಾಮೀಲಾಗಿ ಈ ಷಡ್ಯಂತ್ರ ರೂಪಿಸುತ್ತಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪದ ಬಗ್ಗೆ ಕೇಳಿದಾಗ, “ಅವರು ಮಾಡಿರುವ ಆರೋಪ ಸತ್ಯ ಎಂದು ನಾನು ಹೇಳುತ್ತಿದ್ದೇನೆ. ಯಾವುದೇ ವ್ಯಕ್ತಿ ಮತಪಟ್ಟಿಯಿಂದ ಹೆಸರು ತೆಗೆಸಲು ಅರ್ಜಿ ನೀಡಿದರೆ ಆತ ತನ್ನ ಮೊಬೈಲ್ ಸಂಖ್ಯೆ ನೀಡಬೇಕು ಹಾಗೂ ಆ ಸಂಖ್ಯೆಗೆ ಓಟಿಪಿ ಹೋಗಬೇಕಲ್ಲವೇ? ಈ ಎಲ್ಲವನ್ನೂ ಪರಿಶೀಲನೆ ಮಾಡಿದ ಬಳಿಕ ಮತಪಟ್ಟಿಯಲ್ಲಿ ಹೆಸರು ತೆಗೆಯಬೇಕು.

ಈ ವಿಚಾರವಾಗಿಯೇ ರಾಹುಲ್ ಗಾಂಧಿ ಅವರು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ. ನಮ್ಮ ಮತ, ನಮ್ಮ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಕಾಯುವುದು ಚುನಾವಣಾ ಆಯೋಗದ ಕರ್ತವ್ಯ, ಕಸಿಯುವುದಲ್ಲ. ಪ್ರತಿಯೊಬ್ಬರ ಹಕ್ಕು ರಕ್ಷಣೆ ಮಾಡಿ, ರಾಜಕೀಯ ಪಕ್ಷಗಳ ಮೇಲೆ ಅವಲಂಬಿತರಾಗಬೇಡಿ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತವೆಯೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಆಯೋಗ ನ್ಯಾಯಬದ್ಧವಾಗಿ ಮತದಾನದ ಹಕ್ಕು ಕಾಪಾಡಬೇಕು” ಎಂದು ತಿಳಿಸಿದರು.

ಆಯೋಗ ಮಾಹಿತಿ ನೀಡದಿದ್ದಾಗ ನ್ಯಾಯಾಲಯದ ಮೊರೆ ಏಕೆ ಹೋಗಲಿಲ್ಲ ಎಂದು ಕೇಳಿದಾಗ, “ಸರ್ಕಾರ ಏಕೆ ನ್ಯಾಯಾಲಯದ ಮೊರೆ ಹೋಗಬೇಕು? ಮತದಾನದ ಹಕ್ಕು ತಪ್ಪಿರುವ ಜನಸಾಮಾನ್ಯರು ಹೋಗುತ್ತಾರೆ” ಎಂದರು. ರಾಹುಲ್ ಗಾಂಧಿ ಅವರ ಆರೋಪ ಸುಳ್ಳು ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹಾಗೂ ಕೇಂದ್ರ ಚುನಾವಣಾ ಆಯೋಗ ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಆಯೋಗಕ್ಕೆ ಮಾಹಿತಿ ಕೇಳಿ ಬರೆದಿರುವ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು?” ಎಂದು ಪ್ರಶ್ನಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!