ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರತಿಯೊಬ್ಬರೂ ಜೀವನದಲ್ಲಿ ಆರ್ಥಿಕ ಸಾಕ್ಷರತೆ ಹೊಂದಿರಬೇಕು. ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳಬಾರದು ಎನ್ನುವ ಹಿನ್ನೆಲೆಯಲ್ಲಿ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ ಅನಿಯಂತ್ರಿತ ಘಟಕಗಳ ಕಾರ್ಯಾಚರಣೆಯನ್ನು ನಿಯಂತ್ರಿಸಲು ಉದ್ದೇಶ ಹೊಂದಲಾಗಿದೆ ಎಂದು ಮೈಕ್ರೋ ಫೈನಾನ್ಸ್ ಇಂಡಸ್ಟ್ರಿ ನೆಟ್‌ವರ್ಕ್ ಉಪಾಧ್ಯಕ್ಷ ಮಂಜುನಾಥ ಎಂ.ಎಸ್. ಹೇಳಿದರು.
ಡಂಬಳ ಗ್ರಾಮದಲ್ಲಿ ಚೈತನ್ಯ ಇಂಡಿಯಾ ಫಿನ್‌ಕ್ರೆಡಿಟ್ ಪ್ರೈ. ಲಿ ನೇತೃತ್ವದಲ್ಲಿ ಮೈಕ್ರೋ ಫೈನಾನ್ಸ್ ಇಂಡಸ್ಟ್ರಿ ನೆಟ್‌ವರ್ಕ್, ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಮಾನ್ಯತೆ ಪಡೆದ ಎನ್‌ಬಿಎಫ್‌ಸಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ಸ್ವಯಂ ನಿಯಂತ್ರಣ ಸಂಸ್ಥೆಗಳ ಮೈಕ್ರೋ ಫೈನಾನ್ಸ್ ಜಾಗೃತಿ ಮತ್ತು ಆರ್ಥಿಕ ಸಲಹಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಜನರಿಗೆ ಆರ್ಥಿಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವುದು, ಔಪಚಾರಿಕ ಹಣಕಾಸು ಸಂಸ್ಥೆಗಳ ಅರಿವು ಮೂಡಿಸುವುದು ಹಾಗೂ ಜವಾಬ್ದಾರಿಯುತ ಸಾಲ ಹೂಡಿಕೆ ಪದ್ಧತಿಗಳನ್ನು ಉತ್ತೇಜಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅಲ್ಲದೆ ಸೂಕ್ಷ್ಮ ಸಾಲ ಮತ್ತು ಸಣ್ಣ ಸಾಲ ಬಲವಂತದ ಕ್ರಮಗಳ ತಡೆಗಟ್ಟುವಿಕೆ, ಸುಗ್ರೀವಾಜ್ಞೆ 2025 ಅನ್ವಯಿಸುವಿಕೆ, ಆರ್‌ಬಿಐ ನಿಯಂತ್ರಿತ ರಾಜ್ಯ ನೋಂದಾಯಿತ ಹಾಗೂ ನೋಂದಾಯಿಸದ ಹಣಕಾಸು ಸಂಸ್ಥೆಗಳ ವ್ಯತ್ಯಾಸ, ಮೈಕ್ರೋಫೈನಾನ್ಸ್‌ನ ಗುಣಲಕ್ಷಣಗಳು, ಆರ್‌ಬಿಐ ಮಾರ್ಗಸೂಚಿಗಳು, ಉಳಿತಾಯ, ಹೂಡಿಕೆ, ವಿಮಾ ಯೋಜನೆಗಳು, ವಂಚನೆ ತಡೆಗಟ್ಟುವಿಕೆ ಮತ್ತು ಮೂರು ಹಂತದ ಗ್ರಾಹಕ ಕುಂದುಕೊರತೆ ಪರಿಹಾರ ವ್ಯವಸ್ಥೆ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಸಲಹೆಗಾರ ಸಂದೀಪ್ ಕಟ್ಟಿ ಬಜೆಟ್ ನಿರ್ವಹಣೆ, ಹೂಡಿಕೆ, ಸಾಲದ ಆಯ್ಕೆಗಳು ಮತ್ತು ವಂಚನೆ ತಡೆಗಟ್ಟುವ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು. ಚೈತನ್ಯ ಇಂಡಿಯಾ ಫಿನ್‌ಕ್ರೆಡಿಟ್ ವಿಭಾಗೀಯ ವ್ಯವಸ್ಥಾಪಕ ವೀರೇಶ್, ಬಜಾಜ್ ಫೈನಾನ್ಸ್ ಪ್ರಾದೇಶಿಕ ವ್ಯವಸ್ಥಾಪಕ ಅಪ್ಪಣ್ಣ ಹಂಪಣ್ಣವರ್ ಮಾತನಾಡಿದರು.