ಜೈಪುರ:- ಲಿವ್ ಇನ್ ಗೆಳೆಯನಿಗಾಗಿ ತನ್ನ ಹೆತ್ತ ಮಗುವನ್ನೇ ಪಾಪಿ ತಾಯಿಯೋರ್ವಳು ಕೆರೆಗೆ ಎಸೆದಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಜರುಗಿದೆ.
28 ವರ್ಷದ ಅಂಜಲಿ ತನ್ನ ಮಗುವನ್ನೇ ಹತ್ಯೆಗೈದ ಪಾಪಿ ತಾಯಿ. ಆಕೆಯನ್ನು ಕ್ರಿಶ್ಚಿಯನ್ ಗಂಜ್ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಮೂರು ವರ್ಷದ ಮಗಳನ್ನು ಲಾಲಿ ಹಾಡಿ ಮಲಗಿಸಿ ಬಳಿಕ ಕೆರೆಗೆ ಎಸೆದಿದ್ದಾಳೆ. ನಂತರ ಮಗು ಕಾಣೆಯಾಗಿದೆ ಎಂದು ನಟಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಹೆಡ್ ಕಾನ್‌ಸ್ಟೆಬಲ್ ಗಸ್ತು ತಿರುಗುವ ವೇಳೆ ಅಂಜಲಿ ಹಾಗೂ ಆಕೆಯ ಪ್ರಿಯಕರ ಎದುರಾಗಿದ್ದರು. ಈ ವೇಳೆ ರಾತ್ರಿ ಸಮಯದಲ್ಲಿ ಇಲ್ಲೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಆಗ ತಾನು ತನ್ನ ಮಗಳೊಂದಿಗೆ ಮನೆಯಿಂದ ಹೊರಟಿದ್ದೆ. ಆದರೆ ಮಗು ದಾರಿಯಲ್ಲಿ ಕಾಣೆಯಾಗಿದೆ. ರಾತ್ರಿಯಿಡೀ ಅವಳನ್ನು ಹುಡುಕಿದರೂ, ಆಕೆ ಪತ್ತೆಯಾಗಿಲ್ಲ ಎಂದು ಹೇಳಿದ್ದಳು. ಮರುದಿನ ಮಗುವಿನ ಶವ ಕೆರೆಯಲ್ಲಿ ಪತ್ತೆಯಾಗಿತ್ತು.
ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ, ಅಂಜಲಿ ತನ್ನ ಮಗಳನ್ನು ಎತ್ತಿಕೊಂಡು ನಗರದ ಅನಾ ಸಾಗರ್ ಕೆರೆಯ ಬಳಿ ಓಡಾಡಿದ್ದು ಪತ್ತೆಯಾಗಿತ್ತು. ಕೆಲವು ಗಂಟೆಗಳ ನಂತರ, ಬೆಳಗಿನ ಜಾವ 1:30ರ ಸುಮಾರಿಗೆ, ಮಹಿಳೆ ಒಬ್ಬಂಟಿಯಾಗಿ, ಮೊಬೈಲ್‌ನಲ್ಲಿ ಮಾತಾಡುತ್ತಿರುವುದು ಸೆರೆಯಾಗಿತ್ತು. ಈ ದೃಶ್ಯಗಳು ಅವಳ ಹೇಳಿಕೆಗೆ ವಿರುದ್ಧವಾಗಿದ್ದು, ಅನುಮಾನ ಹುಟ್ಟಿಸಿತ್ತು. ಆಕೆಯನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.