ಗದಗ:- ತಾಲೂಕಿನ ಹರ್ಲಾಪೂರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಭೀಕರ ಅಪಘಾತಕ್ಕೆ ಕಾರು ಛಿದ್ರ ಛಿದ್ರಗೊಂಡಿದ್ದು, ಮೃತ ಮೂವರಲ್ಲಿ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾರೆ. ಅಲ್ಲದೇ ಇವರು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಾಗಿತ್ತು. ದುರಾದೃಷ್ಟವಶಾತ್ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ. 29 ವರ್ಷದ ಅರ್ಜುನ ನೆಲ್ಲೂರ, 31 ವರ್ಷದ ವೀರೇಶ ಉಪ್ಪಾರ, ಹಸೆಮಣಿ ಏರಬೇಕಿದ್ದ ಮೃತ ಪೊಲೀಸ್ ಕಾನಸ್ಟೇಬಲ್ ಗಳು. ಮತ್ತೊರ್ವ ಅರ್ಜುನ ಅವರ ಚಿಕ್ಕಪ್ಪ ರವಿ ನೆಲ್ಲೂರ (43) ಮೃತ ದುರ್ದೈವಿ.
ಮೃತ ಕಾನ್ಸ್‌ಟೇಬಲ್ ಅರ್ಜುನ್ ನೆಲ್ಲೂರ ಅವರು, ಟಿರ್ವಿ ಪೊಲೀಸ್ ಸೆಲ್ಯೂಟ್ ಅವಾರ್ಡ್ ಗಿಟ್ಟಿಸಿಕೊಂಡಿದ್ದರು ಎನ್ನಲಾಗಿದೆ. ಇವರು ಹಾವೇರಿ ಜಿಲ್ಲಾ ಪೊಲೀಸ್ ವೈರ್ ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇನ್ನೂ ವೀರೇಶ ಉಪ್ಪಾರ ಕೊಪ್ಪಳ ಜಿಲ್ಲಾ ಪೊಲೀಸ್ ನಲ್ಲಿ ವೈರ್ ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅರ್ಜುನ್ ಹಾಗೂ ವೀರೇಶ ಇಬ್ಬರು ಪೊಲೀಸ್ ಇಲಾಖೆ ಸೇರಿ ಏಳು ವರ್ಷವಾಗಿದೆ.
ಡಿವೈಡರ್ ಗೆ ಪುಟ್ಬಾಲ್ ನಂತೆ ಬಂದ ಕಾರು ಬಸ್ ಗೆ ಡಿಕ್ಕಿಯಾಗಿದೆ. ಅಪಘಾತದ ಭಯಾನಕತೆ ಬಗ್ಗೆ ಗೋವಾ ಬಸ್ ಚಾಲಕ ದಿಲೀಪ್ ಹಾಗೂ ನಿರ್ವಾಹಕ ಹೀರೇಶ ಹೇಳಿಕೆ ನೀಡಿದ್ದಾರೆ. ಕಾರು ವೇಗವಾಗಿ ಬರ್ತಾಯಿತ್ತು. ಏಕಾಏಕಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಜಂಪ್ ಆಗಿ ಫುಟ್ಬಾಲ್ ನಂತೆ ಬಂದು ಬಸ್ ಗೆ ಡಿಕ್ಕಿ ಆಯ್ತು. ಆಗ ಎದೆ ಝಲ್ ಎಂತು, ಕೂಡಲೇ ಏನಾಯಿತು ಅಂತ ನೋಡುವಷ್ಟರಲ್ಲಿ ಕಾರ್ ಡಿಕ್ಕಿ ಆಯ್ತು.. ಕೆಳಗೆ ಇಳಿದು ನೋಡಿದ್ರೆ ಕಾರ್ ನಲ್ಲಿ ಇದ್ದವ್ರು ಮೂವರು ಸಾವನ್ಮಪ್ಪಿದ್ರು. ಅಪಘಾತದ ಭೀಕರತೆಗೆ ಕಾರ್ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು ಎಂದು ಅಪಘಾತದ ಭಯಾನಕ ಘಟನೆಯನ್ನು ಮಾಧ್ಯಮಗಳಿಗೆ ವಿವರಿಸಿದ್ದಾರೆ.



