ಗದಗ: ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಎಸ್.ಎಸ್. ಚೌತಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಬಿ. ಲಕ್ಷ್ಮೇಶ್ವರ ಅವರ ಸೇವಾ ಪುಸ್ತಕವನ್ನು ಬೆಂಗಳೂರಿನ ಮಹಾಲೇಖಪಾಲಕರ ಕಚೇರಿಗೆ ಕಳುಹಿಸಲು FDA ಚೌತಾಯಿ ₹4,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಆರೋಪದ ಮೇಲೆ ಇಂದು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ, ಉಪಾಧೀಕ್ಷಕ ವಿಜಯ್ ಬಿರಾದಾರ ಹಾಗೂ ನಿರೀಕ್ಷಕಿ ಎಸ್.ಎಸ್. ತೇಲಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಎಮ್.ಎಮ್. ಅಯ್ಯನಗೌಡರ, ಎಮ್.ಎಸ್. ಗಾರ್ಗಿ, ಯು.ಎನ್. ಸಂಗನಾಳ, ಎನ್.ಪಿ. ಅಂಬಿಗೇರ, ಟಿ.ಎನ್. ಜವಳಿ, ಎಮ್.ಬಿ. ಬಾರಡ್ಡಿ, ಎಮ್.ಎಸ್. ದಿಡಗೂರ, ಪಿ.ಎಲ್. ಪಿರಿಮಾಳ, ಎಸ್.ವಿ. ನೈನಾಪೂರ, ಎಮ್.ಐ. ಹಿರೇಮಠ ಮತ್ತು ಐ.ಎಸ್. ಸೈಪಣ್ಣವರ ಪಾಲ್ಗೊಂಡಿದ್ದರು. ಗದಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.