ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ 24.58 ಕೋಟಿ ರೂಗಳ ಅನುದಾನಕ್ಕೆ ಮಂಜೂರಾತಿ ನೀಡಿದ್ದು, ಅತಿ ಶೀಘ್ರದಲ್ಲಿ ಮಲಪ್ರಭಾ ಮತ್ತು ಕೃಷ್ಣಾ ಬಿ ಸ್ಕೀಮ್ ಮೂಲಕ ಎರಡೂ ತಾಲೂಕುಗಳಲ್ಲಿ ಇರುವ ಕೆರೆಗಳನ್ನು ಭರ್ತಿಗೊಳಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ತಾಲೂಕಾ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ 24-25ನೇ ಸಾಲಿನ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಣ ತಾಲೂಕಿನ 9 ಕೆರೆಗಳಿಗೆ ಮಲಪ್ರಭಾ ನದಿಯ ನೀರು ತುಂಬಿಸುವ ಕಾರ್ಯಕ್ಕೆ 43.50 ಕೋಟಿ ಮತ್ತು ರೋಣ ವಿಭಾಗಕ್ಕೆ ಬರುವ ಮಲಪ್ರಭಾ ಬಲದಂಡೆ ಇಟಗಿ ಕಾಲುವೆಗಳ ಆಧುನೀಕರಣ, ಕಾಲುವೆ ನಿರ್ಮಾಣ ಮಾಡಲು 31.8 ಕೋಟಿ ಸೇರಿ ಒಟ್ಟು 74.58 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ ಎಂದರು.
ಗಜೇಂದ್ರಗಡ ತಾಲೂಕಿನಲ್ಲಿರುವ ಕೆರೆಗಳನ್ನು ಕೃಷ್ಣಾ ಬಿ ಸ್ಕೀಮ್ ಮೂಲಕ ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಈಗಾಗಲೇ 115 ಕೋಟಿ ರೂಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೂ ಸಹ ಸಿದ್ದರಾಮಯ್ಯನವರು ಸಕಾರಾತ್ಮಕ ಸ್ಪಂದನೆ ನೀಡಿದ್ದು, ಶೀಘ್ರವೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದ್ದರಿಂದ, ಗಜೇಂದ್ರಗಡ ತಾಲೂಕಿನಲ್ಲಿನ ಕೆರೆಗಳನ್ನು ಭರ್ತಿ ಮಾಡುವ ಕಾರ್ಯಕ್ಕೆ ಶೀಘ್ರವೇ ಚಾಲನೆ ಸಿಗಲಿದೆ ಎಂದರು.
ರೋಣ ಮತ್ತು ಗಜೇಂದ್ರಗಡ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ನಿರೀಕ್ಷೆಗೂ ಮೀರಿ ಸುರಿದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಅನುಭವಿಸಿದ್ದಾರೆ. ಮುಂಗಾರು ಹಂಗಾಮಿನ ಬೆಳೆಗಳನ್ನು ಕಳೆದುಕೊಂಡು ನಷ್ಟ ಅನುಭವಿಸಿದ್ದಾರೆ. ಅವರ ನೆರವಿಗೆ ಧಾವಿಸಬೇಕಿರುವುದು ನಮ್ಮ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ. ಈ ದಿಶೆಯಲ್ಲಿ ಈಗಾಗಲೇ ಬೆಳೆ ಹಾನಿ ಸಮೀಕ್ಷಾ ತಂಡ ಎರಡೂ ತಾಲೂಕುಗಳಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ವರದಿ ಸರ್ಕಾರಕ್ಕೆ ತಲುಪಿದೆ. ಅತಿ ಶೀಘ್ರದಲ್ಲಿ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗಲಿದೆ ಎಂದರು.
ರಮೇಶ ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಬಸವರಾಜ ನವಲಗುಂದ, ವಿ.ಆರ್. ಗುಡಿಸಾಗರ, ವಿ.ಬಿ. ಸೋಮನಕಟ್ಟಿಮಠ, ವೀರಣ್ಣ ಶೆಟ್ಟರ, ಪರಶುರಾಮ ಅಳಗವಾಡಿ, ಯೂಸುಫ್ ಇಟಗಿ, ಸಂಗಪ್ಪ ಮೆಣಸಿನಕಾಯಿ, ಅಂದಪ್ಪ ಬಿಚ್ಚೂರ, ರೂಪಾ ಅಂಗಡಿ, ಮಂಜುಳಾ ಹುಲ್ಲಣ್ಣವರ, ಮೋಹನ್ ಹುಲ್ಲಣ್ಣವರ, ಬಸವರಾಜ ಕರಿಗೌಡ್ರ, ಬಸನಗೌಡ ಪೊಲೀಸ್ ಪಾಟೀಲ ಸೇರಿದಂತೆ ನಿರ್ದೇಶಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ರೈತರು ಸಹಕಾರಿ ಕ್ಷೇತ್ರಗಳಿಂದ ಪಡೆದ ಸಾಲವನ್ನು ಸಕಾಲಕ್ಕೆ ಪಾವತಿಸಬೇಕು. ಅಂದಾಗ ಸಹಕಾರಿ ಸಂಘಗಳು ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ. ಸಹಕಾರಿ ಸಂಘಗಳು ರೈತರ ಹಿತವನ್ನು ಬಯಸುವ ಸಂಸ್ಥೆಗಳಾಗಿದ್ದು, ರೈತರ ಆರ್ಥಿಕ ಬಲವರ್ಧನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ರೋಣ ತಾಲೂಕಿನ ಪಿಎಲ್‌ಡಿ ಬ್ಯಾಂಕ್ ಇದಕ್ಕೆ ಸಾಕ್ಷಿಯಾಗಿದ್ದು, ಸಹಕಾರಿ ಸಂಘಗಳ ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ನಾನು ನೀಡುತ್ತೇನೆ. ರೈತರು ಸಹ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ಸಹಕಾರಿ ಕ್ಷೇತ್ರದ ಪ್ರಗತಿಗೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.