
ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಸೃಜನಶೀಲತೆಯನ್ನು ಮೂಡಿಸುತ್ತವೆ. ಆಟ ಹಾಗೂ ಪಾಠಗಳು ವಿದ್ಯಾರ್ಥಿ ಜೀವನಕ್ಕೆ ಪ್ರೇರಣೆ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸ್ಥಿರತೆಯನ್ನು ಒದಗಿಸುತ್ತವೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಗದುಗಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3ರಲ್ಲಿ ಗದುಗಿನ ಶಿಕ್ಷಣ ಪ್ರೇಮಿಗಳಾದ ಅನಂತ ಧ್ಯಾನ ಪರಿವಾರ ಇವರು ಶಾಲೆಗೆ ಕೊಡಮಾಡಿದ ಒಳಾಂಗಣ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮನರಂಜನೆ ಮುಖ್ಯ. ದಾನಿಗಳು ಸರಕಾರಿ ಶಾಲೆಗಳ ಮೇಲಿನ ಅಭಿಮಾನದಿಂದ ಶೈಕ್ಷಣಿಕವಾಗಿ ಬೆಂಬಲಿಸಲು ಕ್ರೀಡಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸಿರುವುದು ಮಾದರಿ ಕಾರ್ಯ ಎಂದರು.
ಶಾಲಾ ಮುಖ್ಯೋಪಾಧ್ಯಾಯಿ ಪಿ.ಎಸ್. ಮಣ್ಣೂರ ಮಾತನಾಡಿ, ಸರಕಾರಿ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ನಮ್ಮೆಲ್ಲರ ಗುರಿಯಾಗಿದೆ. ಸರಕಾರದ ಉಚಿತ ಯೋಜನೆಗಳೊಂದಿಗೆ ಚಿಂತಕರು ಸರಕಾರಿ ಶಾಲಾ ಮಕ್ಕಳಿಗೆ ನೀಡುವ ವಿವಿಧ ಕೊಡಗೆಗಳು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಹಾಯಕವಾಗುತ್ತವೆ ಎಂದರಲ್ಲದೆ, ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ ದಾನಿಗಳಿಗೆ ಧನ್ಯವಾದ ಅರ್ಪಿಸಿದರು.
ಎಸ್.ಎಸ್. ಹಿರೇಮಠ ಸ್ವಾಗತಿಸಿದರು, ಜೆ.ಕೆ. ಕಾಳೆ ನಿರೂಪಿಸಿದರು, ಎಸ್.ಬಿ. ಬಾಗೂರ ವಂದಿಸಿದರು.