ಬೆಂಗಳೂರು:- ಜಾತಿಗಣತಿ ಸಮೀಕ್ಷೆ ನಾವು ಕೂಡ ಸ್ವಾಗತಿಸುತ್ತೇವೆ, ಆದ್ರೆ ತರಾತುರಿ ಬೇಡ ಎಂದು ನಿರ್ಮಲಾನಂದ ಶ್ರೀಗಳು ಸಲಹೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಮೀಕ್ಷೆ ಮುಂದೂಡಬೇಕು, ಕಾಲಮಿತಿ ಹೆಚ್ಚು ಮಾಡಿ ಸಮೀಕ್ಷೆ ನಡೆಸಬೇಕು. ನಾವು ಕೂಡ ಸಮೀಕ್ಷೆ ಸ್ವಾಗತಿಸುತ್ತೇವೆ, ಕೆಲ ನ್ಯೂನತೆ ಸರಿಪಡಿಸಬೇಕು. ಕ್ರಿಶ್ಚಿಯನ್, ಜೈನ ಈ ರೀತಿ ಧರ್ಮಗಳ ಜಾತಿಗಳಿಗೆ ಸೇರಿಸುವುದು ಸರಿ ಇಲ್ಲ ಎಂದು ಅವರು ಎಚ್ಚರಿಕೆ ಕೊಟ್ಟರು.
15 ದಿನಗಳ ಕಾಲ ಸಮೀಕ್ಷೆ ಮಾಡಲು ಹೊರಟಿದ್ದಾರೆ. ಅದರಲ್ಲಿ, 9 ದಿನಗಳು ನವರಾತ್ರಿ, ಎಲ್ಲರೂ ಶ್ರದ್ಧೆಯಿಂದ ಆಚರಣೆ ಮಾಡ್ತಾರೆ. ಹೀಗಾಗಿ ಸಮೀಕ್ಷೆಯಿಂದ ಯಾವ ಮಟ್ಟಕ್ಕೆ ಪೂರ್ಣ ಆಗುತ್ತೆ. ರಜೆಯ ಕಾರಣ ಎಲ್ಲರೂ ಅವರವರ ಊರಿಗೆ ಹೋಗ್ತಾರೆ. ಸಮೀಕ್ಷೆಯ ಸದ್ದುದ್ದೇಶ ಅರ್ಥಪೂರ್ಣ ಆಗಬೇಕು. ಎಲ್ಲರೂ ಒಕ್ಕಲಿಗ ಎಂದು ಬರೆಸಬೇಕು. ಕೋಡ್ ಎ 1545 ಎಂದು ಬರೆಸಬೇಕು. ಜಾತಿಗಣತಿ ಮುಂದೂಡಿ ಅನ್ನೋದು ನಮ್ಮ ನಿರ್ಣಯ, ಸರ್ಕಾರ ಸ್ಪಂದಿಸುವ ಭರವಸೆ ಇದೆ ಎಂದರು.
ಇದೇ ವೇಳೆ ಧರ್ಮ ಸೇರಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಸರಿ ಇಲ್ಲ. ಇದು ಮುಂದೆ ಮುಸ್ಲಿಂ ಒಕ್ಕಲಿಗ, ಮುಸ್ಲಿಂ ಲಿಂಗಾಯತ ಅಂದ್ರೆ ಹೇಗೆ? ಮುಸ್ಲಿಂ ಹಿಂದೂ ಅಂತಾ ಮಾಡಿದ್ರೆ.? ಇದನ್ನ ಸಹಿಸಲು ಆಗಲ್ಲ ಎಂದು ಕಿಡಿಕಾರಿದರು.