ವಿಜಯಸಾಕ್ಷಿ ಸುದ್ದಿ, ರೋಣ: ಗುಳಗುಳಿ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ಅನುದಾನವನ್ನು ಒದಗಿಸಲಾಗುವುದು. 1 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರು ಸಂಗ್ರಹ ಘಟಕಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ಗುಳಗುಳಿ ಗ್ರಾಮದಲ್ಲಿ ವಿವೇಕ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಶಾಲಾ ಕೊಠಡಿ ಹಾಗೂ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಮತ್ತು ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ನಿರ್ಮಾಣಗೊಳ್ಳುವ ಕಟ್ಟಡಗಳು ಬಾಳಿಕೆ ಬರುಬೇಕು. ಅವಕಾಶಗಳು ಸಿಕ್ಕಾಗ ಗ್ರಾಮೀಣ ಭಾಗಗಳಿಗೆ ಯೋಜನೆಗಳು ದೊರಕುತ್ತವೆ. ಹೀಗಿದ್ದಾಗ ಕಟ್ಟಡಗಳು ಕಳಪೆ ಗುಣಮಟ್ಟದಿಂದ ಕೂಡಿದ್ದರೆ ಪ್ರಯೋಜನವಿಲ್ಲ. ಅಧಿಕಾರಿಗಳೇನು ಕಟ್ಟಡ ನಿರ್ಮಾಣದ ಕುರಿತು ಗಮನ ಹರಿಸುವುದಿಲ್ಲವೇ? ಸರಕಾರದ ಅನುದಾನ ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕು ಎಂದು ಪಿಡಬ್ಲ್ಯೂಡಿ ಮತ್ತು ಜಿ.ಪಂ ಅಭಿಯಂತರರ ವಿರುದ್ಧ ಆಕ್ರೋಶ ಹೊರಹಾಕಿದರು.
ಕಚೇರಿಯಲ್ಲಿ ಕುಳಿತುಕೊಳ್ಳುವ ಬದಲು ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಿಗೆ ಹೋಗಿ ಪರಿಶೀಲನೆ ನಡೆಸಿ ಎಂದು ಸ್ಥಳದಲ್ಲಿದ್ದ ಅಭಿಯಂತರರಿಗೆ ಶಾಸಕರು ಸೂಚಿಸಿದರು.
ಗಜೇಂದ್ರಗಡ ನಗರದಿಂದ ಗುಳಗುಳಿ ಮಾರ್ಗವಾಗಿ ಬದಾಮಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಗ್ರಾಮಸ್ಥರ ಬಹು ಮುಖ್ಯ ಬೇಡಿಕೆಯಾಗಿತ್ತು. ಗ್ರಾಮಸ್ಥರ ಇಚ್ಛೆಯಂತೆ ಅದಕ್ಕೂ ಸಹ ಇಂದು ಚಾಲನೆ ನೀಡಲಾಗಿದ್ದು, ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಬಸ್ ಸೌಲಭ್ಯವು ವ್ಯಾಪಾರ ವಹಿವಾಟುಗಳಿಗೆ ಮತ್ತು ರೈತರಿಗೆ ಆರ್ಥಿಕ ಶಕ್ತಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ್, ಶರಣಗೌಡ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಮಂಜುಳಾ ಹುಲ್ಲಣ್ಣವರ, ಮೋಹನ್ ಹುಲ್ಲಣ್ಣವರ, ಶ್ರೀಶೈಲಪ್ಪ ಹೆಗ್ಗಣ್ಣವರ, ಯಮನೂರಪ್ಪ ತಳವಾರ, ಕುಬೇರಪ್ಪ ಮುತಾರಿ, ಚಂದ್ರಶೇಖರ ಗೊರವರ, ತಾ.ಪಂ ಇಒ ಚಂದ್ರಶೇಖರ ಕಂದಕೂರ ಸೇರಿದಂತೆ ಗ್ರಾ.ಪಂ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಅಭಿಯಂತರರು, ಮುಖಂಡರು ಉಪಸ್ಥಿತರಿದ್ದರು.
ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದ್ದು, ಮಳೆ ಕಡಿಮೆಯಾಗುತ್ತಿದ್ದಂತೆ ಕೆಲಸ ಆರಂಭಿಸಲಾಗುವುದು. ಗ್ರಾಮದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಲು ಅನುದಾನ ಮೀಸಲಿಡಲಾಗಿದೆ. ಗ್ರಾಮದಲ್ಲಿ ನೂತನ ಗ್ರಾ.ಪಂ ಕಟ್ಟಡ ಉದ್ಘಾಟನೆಗೊಂಡಿದ್ದು, ಸದಸ್ಯರು ತಮ್ಮ ವಾರ್ಡುಗಳ ಪ್ರಗತಿಗೆ ಶ್ರಮಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಸಲಹೆ ನೀಡಿದರು.