ನವರಾತ್ರಿ ಹಬ್ಬವು ಹಿಂದೂ ಸಂಸ್ಕೃತಿಯಲ್ಲಿ ತನ್ನದೇ ಆದ ವೈಶಿಷ್ಟ್ಯ ತೆಯನ್ನು ಪಡೆದಿದೆ. ಅಶ್ವಯುಜ ಮಾಸದ ಶರನ್ನವರಾತ್ರಿ ಎಂದೇ ಪ್ರಸಿದ್ಧವಾಗಿದೆ. ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು. ದುರ್ಗಾದೇವಿಯು ಒಂಬತ್ತು ದಿನಗಳ ಕಾಲ ಮಹಿಷಾಸುರನೊಂದಿಗೆ ಯುದ್ಧಮಾಡಿ ವಿಜಯ ಸಾಧಿಸುತ್ತಾಳೆ.
ನವರಾತ್ರಿ ನವದುರ್ಗೆಯರನ್ನು ಪೂಜಿಸುವ ಹಬ್ಬವಾಗಿದೆ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗಾ ದೇವಿಯು ಒಂಬತ್ತು ಅವತಾರಗಳನ್ನು ತಾಳುತ್ತಾಳೆ. ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಮಹಿಷಾಸುರನೆಂಬ ಅಸುರನು ತನ್ನ ಸೈನ್ಯದೊಂದಿಗೆ ದೇವಲೋಕಕ್ಕೆ ದಾಳಿ ಮಾಡಿ, ದೇವತೆಗಳನ್ನು ಪೀಡಿಸುತ್ತಿದ್ದನು. ಆಗ ದೇವತೆಗಳೆಲ್ಲರೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮಹೇಶ್ವರನನ್ನು ಕಾಪಾಡುವಂತೆ ಕೇಳಿಕೊಂಡಾಗ ತ್ರಿಮೂರ್ತಿಗಳು ತಮ್ಮ ದೇಹದ ಶಕ್ತಿಯನ್ನು ಸೇರಿಸಿ ದೇವತೆಯನ್ನು ಸೃಷ್ಟಿಸಿದರು. ಎಲ್ಲ ದೇವರ ಶಕ್ತಿಯು ಸೇರಿ ದುರ್ಗಾ ದೇವಿಯು ಅವತಾರವೆತ್ತಿದಳು.
ದುಷ್ಟರ ಸಂಹಾರಕ್ಕಾಗಿ ಶಿಷ್ಟರ ರಕ್ಷಣೆಗಾಗಿ ನವ (ಒಂಬತ್ತು) ಅವತಾರಗಳನ್ನು ಎತ್ತಿ, ಅಸುರರನ್ನು ಸಂಹರಿಸಿದ ಶಕ್ತಿ ಸ್ವರೂಪಿಣಿಯೇ ದೇವೀ ದುರ್ಗಾ. ನವರಾತ್ರಿಯ ಒಂಬತ್ತು ದಿನಗಳಲ್ಲಿ ನವದುರ್ಗೆಯರನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ದೇವಿ, ಕೂಷ್ಮಾಂಡ ದೇವಿ, ಸ್ತಕಂದ ಮಾತೆ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ಹೀಗೆ ಒಂಬತ್ತು ದಿನಗಳಲ್ಲಿ ಪೂಜಿಸಲ್ಪಯ್ಯುತ್ತವೆ.
ಶಕ್ತಿಗಳ ಸಂಗಮದಿಂದ ಆದ ದುರ್ಗಾದೇವಿಗೆ ದೇವತೆಗಳೆಲ್ಲ ಆಯುಧಗಳನ್ನು ನೀಡಿದರು. ಎಲ್ಲ ಆಯುಧಗಳಿಂದ ಸನ್ನದ್ಧವಾದ ದೇವಿಯು ಯುದ್ಧಕ್ಕೆ ಸಿದ್ಧಳಾಗಿ ಅಸುರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು. ಒಂಬತ್ತು ದಿನಗಳ ಕಾಲ ಯುದ್ಧಮಾಡಿ ಮಹಿಷಾಸುರನನ್ನು ಸಂಹರಿಸಿದಳು. ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯ ದಶಮಿಯಾಗಿದೆ. ಶ್ರೀ ರಾಮದೇವರು ರಾವಣನನ್ನು ಸಂಹಾರ ಮಾಡಿದ ದಿನವೂ ವಿಜಯದಶಮಿಯಾಗಿದೆ. ಪಾಂಡವರು ಒಂದು ವರ್ಷ ಅಜ್ಞಾತವಾಸದಲ್ಲಿದ್ದಾಗ ತಮ್ಮ ಆಯುಧಗಳನ್ನು ಶಮಿ ವೃಕ್ಷ (ಬನ್ನಿ ಮರದ)ದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರದಲ್ಲಿ ಕೌರವರೊಂದಿಗೆ ಯುದ್ಧ ಮಾಡಿ ವಿಜಯ ಸಾಧಿಸಿದ ದಿನವಾಗಿದೆ. ಹೀಗಾಗಿ ದಸರಾ ಹಬ್ಬವು ಸತ್ಯ, ಧರ್ಮ, ಶಕ್ತಿಯ ಆರಾಧನೆಯ ಸಂಕೇತವಾಗಿದೆ.
ದಸರಾ (ವಿಜಯದಶಮಿ) ಹಬ್ಬವು ಹಿಂದೂ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವ ಪಡೆದ ಹಬ್ಬವಾಗಿದೆ. ಅಶ್ವಯುಜ ಮಾಸದ ದಶಮಿಯಂದು ದಸರಾ ಹಬ್ಬವನ್ನು ಆಚರಿಸುತ್ತಾರೆ. ಇದು ಅಧರ್ಮದ ಮೇಲೆ ಧರ್ಮದ ಜಯ, ದುಷ್ಟರ ಮೇಲೆ ಶಿಷ್ಟರ ಜಯ ಇವುಗಳ ಪ್ರತೀಕವಾಗಿದೆ.
ಲಲಿತಾ ಪಂಚಮಿಯು ನವರಾತ್ರಿಯ 5ನೇ ದಿನ ನಡೆಯುವ ಪೂಜೆಯಾಗಿದೆ. ಲಲಿತಾ ಸಹಸ್ರ ನಾಮ ಪಠಣೆ, ಲಲಿತಾ ಅಷ್ಟೋತ್ತರ ಶತನಾಮಗಳನ್ನು ಭಕ್ತರು ಪಠಿಸುತ್ತಾ ಲಲಿತಾ ದೇವಿಯ ಪೂಜೆ ಮಾಡುತ್ತಾರೆ.
ಮಹಾನವಮಿಯು ನವರಾತ್ರಿಯ 9ನೇ ದಿನವಾಗಿದೆ. ಇದು ಅತ್ಯಂತ ಮಹತ್ವದ ದಿನಗಳಲ್ಲಿ ಒಂದು. ಈ ದಿನ ಆಯುಧ ಪೂಜೆ ಮತ್ತು ಸರಸ್ವತಿ ದೇವಿಯ ಪೂಜೆಯನ್ನು ಮಾಡುತ್ತಾರೆ. ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ದೇವಿ ದುರ್ಗೆಯನ್ನು ಅಲಂಕರಿಸಿ ಪೂಜೆ ಮಾಡುತ್ತಾರೆ. ಈ ದಿನ ಪುಸ್ತಕಗಳು, ಸಂಗೀತ ವಾದ್ಯಗಳು, ಆಯುಧಗಳು, ಕೆಲಸಕ್ಕಾಗಿ ಬಳಸುವ ಸಾಧನಗಳನ್ನು ದೇವಿಗೆ ಸಮರ್ಪಿಸಿ ಪೂಜೆ ಮಾಡುತ್ತಾರೆ. ಪೂಜೆ ಮಾಡಿದ ಸಾಧನಗಳನ್ನು ದೇವಿಯ ಆಶೀರ್ವಾದಕ್ಕಾಗಿ ಅರ್ಪಣೆ ಮಾಡುತ್ತಾರೆ. ವಿಜಯದಶಮಿ ದಿನ ಅವುಗಳನ್ನು ಮರಳಿ ಉಪಯೋಗಿಸಲು ಪ್ರಾರಂಭಿಸುತ್ತಾರೆ.
ಬನ್ನಿ ಹಬ್ಬವನ್ನು ವಿಜಯದಶಮಿ (ದಸರಾ) ಹಬ್ಬವೆಂದು ಆಚರಿಸಲಾಗುತ್ತದೆ. ಬನ್ನಿ ಮರವನ್ನು ಪೂಜಿಸಿ ಅದರ ಎಲೆಗಳನ್ನು ಸುವರ್ಣವೆಂದು ಪರಿಗಣಿಸಿ ವಿಜಯ ದಶಮಿಯ ದಿನದಂದು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ.
ಶ್ರೀಕ್ಷೇತ್ರ ತಿರುಪತಿಯಲ್ಲಿ ನವರಾತ್ರಿಯ ಉತ್ಸವವನ್ನು ಬಹಳ ವೈಭವದಿಂದ ಆಚರಿಸಲಾಗುತ್ತದೆ. ನವರಾತ್ರಿಯಲ್ಲಿ ಪ್ರತಿ ದಿವಸವೂ ವೆಂಕಟೇಶ್ವರ ಸ್ವಾಮಿಗೆ ವಿಭಿನ್ನ ಅಲಂಕಾರ ಮಾಡಲಾಗುತ್ತದೆ. ಉತ್ಸವ ಮೂರ್ತಿಯನ್ನು ಬಂಗಾರದ ರಥ, ಹಂಸ ವಾಹನ, ಸಿಂಹ ವಾಹನ ಹೀಗೆ ವಿವಿಧ ವಾಹನಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಸಮಯದಲ್ಲಿ ವೇದ ಪಾರಾಯಣ, ಸಂಗೀತ ಕಾರ್ಯಕ್ರಮಗಳು, ಹರಿಕಥೆಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳೂ ಸಹ ನಡೆಯುತ್ತವೆ. ತಿರುಪತಿಯಲ್ಲಿ ನವರಾತ್ರಿ ಉತ್ಸವವು ಭಕ್ತರಿಗೆ ಭಕ್ತಿ, ಸಂಸ್ಕೃತಿ ಮತ್ತು ವೈಭವದ ಸಂಕೇತವಾಗಿದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜೆ ವಿಜೃಂಭಣೆಯಾದ ಜರುಗುತ್ತದೆ. ದಸರಾ ಹಬ್ಬದಲ್ಲಿ ಮೈಸೂರು ಅರಮನೆಯನ್ನು ವಿವಿಧ ರೀತಿಯ ದೀಪಗಳಿಂದ ಅಲಂಕರಿಸುತ್ತಾರೆ. ದಸರಾ ಹಬ್ಬದ ನಿಮಿತ್ತ ವಿವಿಧ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜರುಗುತ್ತವೆ. ಅಂಬಾರಿ ಆನೆ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯ ಮೂರ್ತಿಯ (ಪ್ರತಿಮೆಯ) ಮೆರವಣಿಗೆ ದಸರಾ ಜಂಬೂ ಸವಾರಿ ಅಂಬಾರಿಯ ಮೆರವಣಿಗೆಯು ಅತ್ಯಂತ ಮಹತ್ವ ಪಡೆದಿದೆ.
ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ಶಿಲ್ಪಕಲೆಯ ಬೀಡಾಗಿರುವ ಗದುಗಿನಲ್ಲಿ ವೀರನಾರಾಯಣ ದೇವಸ್ಥಾನದಲ್ಲಿ ವೀರನಾರಾಯಣನಿಗೆ ನವರಾತ್ರಿ ಹಬ್ಬದಂದು ವಿವಿಧ ರೀತಿಯ ಅಲಂಕಾರಗಳೊಂ ಟಿಗೆ ಪೂಜೆ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದಸರಾ ದಿನದಂದು ಉತ್ಸವ ಮೂರ್ತಿ ಭವ್ಯ ಮೆರವಣಿಗೆಯು ಸಹ ಜರುಗುತ್ತದೆ. ಅದೇ ರೀತಿ ನವರಾತ್ರಿ ಹಾಗೂ ದಸರಾ ದಿನದಂದು ಗದಗನಲ್ಲಿ ಶಕ್ತಿ ದೇವತೆಯಾದ ದುರ್ಗಾ ದೇವಿಯ ದೇವಸ್ಥಾನಗಳಲ್ಲಿ ವಿವಿಧ ರೀತಿಯ ಅಲಂಕಾರಗಳೊಂ ಟಿಗೆ ಶ್ರದ್ಧಾ ಭಕ್ತಿಯಿಂದ ಭಕ್ತಾದಿಗಳು ಪೂಜೆ ಸಲ್ಲಿಸುತ್ತಾರೆ.
ನವರಾತ್ರಿ ಸಮಯದಲ್ಲಿ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಮನೆ ಮನೆಗಳಲ್ಲಿ ದುರ್ಗಾ ದೇವಿ ಹಾಗೂ ವೆಂಕಟೇಶ್ವರ ದೇವರ ಪೂಜೆಯನ್ನು ಕೈಗೊಳ್ಳುತ್ತಾರೆ. ದೇವಿಯ ಪುರಾಣ ಹಾಗೂ ವೆಂಕಟೇಶ್ವರ ಮಹಾತ್ಮೆಯನ್ನು ಪಠಣ ಹಾಗೂ ಶ್ರವಣ ಮಾಡುತ್ತಾರೆ. ಮನೆಗಳನ್ನು ತಳಿರು ತೋರಣಗಳಿಂದ ಶೃಂಗರಿಸುತ್ತಾರೆ. ಭಕ್ತಿ ಹಾಗೂ ಧಾರ್ಮಿಕತೆಗೆ ಪ್ರತೀಕವಾಗಿರುವ ನವರಾತ್ರಿ ಹಾಗೂ ದಸರಾ ಹಬ್ಬಗಳನ್ನು ಶಾಂತಿ ಮತ್ತು ಸಂಭ್ರಮದಿಂಕ ಆಚರಿಸೋಣ. ಭಗವಂತನ ಅನುಗ್ರಹ ಪಡೆದು ಪಾವನರಾಗೋಣ.
ಅಂಜನಾ ರಾಘವೆಂದ್ರ ಕುಬೇರ.
ಗದಗ.