ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಮನಸ್ಸುಗಳಲ್ಲಿ ಮಾಹಿತಿಗಳನ್ನು ತುಂಬುವುದು ಮಾತ್ರ ಶಿಕ್ಷಣದ ಗುರಿಯಲ್ಲ. ಸಮಗ್ರ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯೇ ಶಿಕ್ಷಣದ ಉದ್ದೇಶವಾಗಿದ್ದು, ಮಕ್ಕಳು ವೈಜ್ಞಾನಿಕ ಹಾಗೂ ವೈಚಾರಿಕ ಭಾವನೆಗಳೊಂದಿಗೆ ಶೈಕ್ಷಣಿಕ ಅಭಿವೃದ್ಧಿ ಕಾಣಬೇಕು ಎಂದು ಗದಗ ಜಯೇಂಟ್ಸ್ ಗ್ರೂಪ್ ಆಫ್ ಸಖಿ-ಸಹೇಲಿಯ ಅಧ್ಯಕ್ಷೆ ಸುಮಾ ಪಾಟೀಲ್ ಹೇಳಿದರು.
ಅವರು ಗದಗ ಜಯೇಂಟ್ಸ್ ಗ್ರೂಪ್ ಆಫ್ ಸಖಿ-ಸಹೇಲಿ ಸಪ್ತಾಹದ 4ನೇ ಕಾರ್ಯಕ್ರಮವಾಗಿ ಗದುಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.11ರಲ್ಲಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಶಾಲೆಗೆ ಕಂಪ್ಯೂಟರ್ ವಿತರಿಸಿ ಮಾತನಾಡಿದರು.
ಮಕ್ಕಳಿಗೆ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ಅತೀ ಅವಶ್ಯವಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಮನೋಭಾವನೆ ಕುರಿತಾಗಿ ತಿಳುವಳಿಕೆ ಅವಶ್ಯವಾಗಿದ್ದು, ಮುಂದೆ ವೈಜ್ಞಾನಿಕತೆಯೊಂದಿಗೆ ಬೆಳೆಯಬೇಕು. ಆ ಉದ್ದೇಶದಿಂದ ಕಲಿಕೆಯಲ್ಲಿ ನಾವೀನ್ಯತೆ ಮೂಡಲಿ ಎಂದು ಕಂಪ್ಯೂಟರ್ ವಿತರಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಆರ್. ಕರಮಡಿ ಮಾತನಾಡಿ, ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ಬಡ ಕುಟುಂಬದ ಮಕ್ಕಳಾಗಿರುವುದರಿಂದ ಅವರಿಗೂ ತಾಂತ್ರಿಕತೆಯ ತಿಳುವಳಿಕೆ ಬೇಕು. ಸರ್ಕಾರ ನೀಡುವ ಉಚಿತ ಯೋಜನೆಗಳು ಮಕ್ಕಳಿಗೆ ತಲುಪಿದ್ದು, ಅವಶ್ಯಕತೆ ಇರುವ ವಸ್ತುಗಳನ್ನು ಸಂಘ-ಸಂಸ್ಥೆಗಳು ಶಾಲೆಗೆ ಬಂದು ಕೊಡುಗೆಯಾಗಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ದಾನಿಗಳು ಬೆನ್ನೆಲುಬಾಗಿದ್ದಾರೆ. ದಾನಿಗಳು ನೀಡುವ ಕೊಡುಗೆಗಳು ಮಕ್ಕಳಿಗೆ ತಲುಪಿ ಸದ್ವಿನಿಯೋಗವಾಗಲಿ. ಕಂಪ್ಯೂಟರ್ ಜ್ಞಾನವು ಬಾಲ್ಯದಲ್ಲಿಯೇ ಮಕ್ಕಳಿಗೆ ರೂಢಿಯಾಗುವುದರಿಂದ ಮುಂದೆ ಉಪಯೋಗ ಆಗುತ್ತದೆ. ಇವರಂತೆಯೇ ದಾನಿಗಳು ಸರ್ಕಾರಿ ಶಾಲೆಗೆ ಆಗಮಿಸಿ ಕೊಡುಗೆಗಳನ್ನು ನೀಡುವಂತೆ ಮನವಿ ಮಾಡಿದರು.
ಶಾಲಾ ಮುಖ್ಯೋಪಾಧ್ಯಾಯೆ ಭಾರತಿ ಕುಲಕರ್ಣಿ ಸ್ವಾಗತಿಸಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ದಾನಿಗಳ ಅವಶ್ಯಕತೆ ಇದೆ. ಇಲ್ಲಿಯ ಮಕ್ಕಳು ಪ್ರತಿಭಾನ್ವಿತರಾಗಿದ್ದು, ಎಲ್ಲ ಮಕ್ಕಳಿಗೆ ತಾಂತ್ರಿಕ ಶಿಕ್ಷಣದ ಹಾಗೂ ವೈಜ್ಞಾನಿಕತೆಯ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದರು.
ಶಾಲಾ ಶಿಕ್ಷಕಿ ಆರ್.ಎಫ್. ಹೊಸಮನಿ ಪರಿಚಯಿಸಿದರು. ಮಂಜುಳಾ ಕೊಳ್ಳಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಅಶ್ವಿನಿ ಮಾದಗುಂಡಿ ಪರಿಚಯಿಸಿದರು. ಶಶಿಕಲಾ ಮಾಲಿಪಾಟೀಲ್ ವಂದಿಸಿದರು. ರೇಖಾ ರೊಟ್ಟಿ, ಶಾಂತಾ ತುಪ್ಪದ, ಶ್ರೀದೇವಿ ಮಹೇಂದ್ರಕರ್, ಸುಷ್ಮಿತಾ ವೇರ್ಣೆಕರ, ಮಾಧುರಿ ಮಾಳೆಕೊಪ್ಪ, ನಿರ್ಮಲಾ ಪಾಟೀಲ್, ಚಂದ್ರಕಲಾ ಸ್ಥಾವರಮಠ, ಅನುರಾಧಾ ಅಮಾತ್ಯೆಗೌಡರ, ಮಧು ಕರಿಬಿಷ್ಠಿ, ವಿದ್ಯಾ ಶಿವನಗುತ್ತಿ ಮುಂತಾದವರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್‌ನ ನಿಕಟಪೂರ್ವ ಜಿಲ್ಲಾ ಗವರ್ನರ್ ಸುಗ್ಗಲಾ ಯಳಮಲಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ವಿಜ್ಞಾನದ ಅವಿಷ್ಕಾರಗಳನ್ನು, ಹೊಸ-ಹೊಸ ಸಂಶೋಧನಾ ಭಾವಗಳನ್ನು ತುಂಬುವ ಅಗತ್ಯತೆ ಇದ್ದು, ತಾಂತ್ರಿಕತೆಯ ಮೂಲಕ ಮಕ್ಕಳು ಶೈಕ್ಷಣಿಕ ವಿಷಯಗಳನ್ನು ಕುತೂಹಲಕಾರಿ ಹಾಗೂ ಸಮಸ್ಯೆಗಳಿಗೆ ಕಂಪ್ಯೂಟರ್-ಇಂಟರ್‌ನೆಟ್ ಮೂಲಕ ಉತ್ತರಗಳನ್ನು ಕಂಡುಕೊಳ್ಳಬಹುದು ಎಂದರು.