ಬೆಂಗಳೂರು:- ಅವೈಜ್ಞಾನಿಕವಾಗಿ ತಯಾರಿಸಿರುವ ರಾಜ್ಯ ಸರ್ಕಾರದ ಜಾತಿಗಣತಿ ವರದಿಯನ್ನು ನಾವು ವಿರೋಧಿಸುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಮಾಜ ಸಮಾಜ ಜೊತೆ ಸಂಘರ್ಷ ತರಲು ರಾಜ್ಯ ಸರ್ಕಾರ ಹೊರಟಿದೆ. 331 ಹೊಸ ಜಾತಿ ಎಲ್ಲಿ ಹುಟ್ಟಿಕೊಂಡಿದೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಜಾತಿ ಸಮೀಕ್ಷೆಗಳು ಆಗಬೇಕಾಗಿರೋದು ಕಟ್ಟಕಡೆಯ ವ್ಯಕ್ತಿ ಮೇಲೆತ್ತಲು ಮಾಡಬೇಕು. ಆರ್ಥಿಕ ಮತ್ತು ಸಾಮಾಜಿಕವಾಗಿ ನ್ಯಾಯವಾದಿಸುವ ನಿಟ್ಟಿನಲ್ಲಿ ಈ ಸಮೀಕ್ಷೆಗಳು ಆಗುವುದರಲ್ಲಿ ನಮ್ಮ ಸ್ವಾಗತ ಇದೆ. ಆದರೆ ಇದರ ಹಿಂದೆ ದುರುದ್ದೇಶಗಳನ್ನು ಇಟ್ಟುಕೊಂಡು ಒಂದು ಸಮುದಾಯವನ್ನು ಮೇಲೆತ್ತಿಕೊಳ್ಳುವುದಕ್ಕೆ ಇನ್ನೊಂದು ಪ್ರಬಲ ಸಮುದಾಯದ ನಂಬರ್ ಗಳನ್ನು ಮುಂದಿಟ್ಟು ಸಮಾಜ ಸಮಾಜಗಳ ನಡುವೆ ಸಂಘರ್ಷ ಉಂಟು ಮಾಡುವುದಕ್ಕೆ ಸರ್ಕಾರ ಮುಂದಾಗಬಾರದು ಎಂದು ಹೇಳಿದರು.
ಇಲ್ಲಿ 331 ಹೊಸ ಜಾತಿಗಳು ಎಲ್ಲಿಂದ ಹುಟ್ಟಿಕೊಳ್ಳುತ್ತೋ ಗೊತ್ತಿಲ್ಲ. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದ ಆಯೋಗ ಮಾಡಿಕೊಂಡು 180 ಕೋಟಿ ಖರ್ಚು ಮಾಡಿದರು, ಈಗ ಮಧುಸೂದನ್ ಅವರ ಅಧ್ಯಕ್ಷತೆಯಲ್ಲಿ ಹೊಸ ಆಯೋಗವನ್ನು ರಚಿಸಿ 15 ದಿನದಲ್ಲಿ 2 ಕೋಟಿ ಜನರ ಮಾಹಿತಿ ಕಲೆ ಹಾಕಲು ಸಾಧ್ಯವಾ..,? ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.