ಭಾರತೀಯ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ. ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದ ಮೋಹನ್ ಲಾಲ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದ್ದು ಹಲವರು ಮೋಹನ್ ಲಾಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 23 ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೋಹನ್ ಲಾಲ್ ಅವರಿಗೆ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಘೋಷಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸರ್ಕಾರ, “ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿ ಶಿಫಾರಸು ಮಾಡಿದಂತೆ, ಭಾರತ ಸರ್ಕಾರವು ಮೋಹನ್ ಲಾಲ್ ಅವರಿಗೆ 2023 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸುತ್ತಿದೆ” ಎಂದು ತಿಳಿಸಿದೆ. ಇದೇ ವೇಳೆ, ಮೋಹನ್ ಲಾಲ್ ಅವರ ಅಸಾಧಾರಣ ಸಿನಿಮಾ ಪ್ರಯಾಣವು ಮುಂದಿನ ಹಲವು ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದಿದೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಮಲಯಾಳಂ ಚಿತ್ರರಂಗದ ಎರಡನೇ ಕಲಾವಿದ ಎಂಬ ಹೆಗ್ಗಳಿಕೆಗೆ ಮೋಹನ್ಲಾಲ್ ಪಾತ್ರರಾಗಿದ್ದಾರೆ. ಈ ಹಿಂದೆ ಅಂದರೆ 2004ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ನೀಡಲಾಗಿತ್ತು. ಈಗ ಮೋಹನ್ಲಾಲ್ ಅವರಿಗೆ 2023 ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. ಮೋಹನ್ ಲಾಲ್ ಅವರು ಸಿನಿಮಾ ರಂಗಕ್ಕೆ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ಮೋಹನ್ ಲಾಲ್ ಅವರಿಗೆ ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ. “ಮೋಹನ್ ಲಾಲ್ ಜಿ ಶ್ರೇಷ್ಠತೆ ಮತ್ತು ಬಹುಮುಖತೆಯ ಸಂಕೇತ. ದಶಕಗಳ ಕಾಲ ಮಲಯಾಳಂ ಸಿನಿಮಾ ಮತ್ತು ರಂಗಭೂಮಿಗೆ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ. ಕೇರಳದ ಸಂಸ್ಕೃತಿಯ ಬಗ್ಗೆ ಅವರಿಗೆ ಆಳವಾದ ಗೌರವವಿದ್ದು, ಅದನ್ನು ತಮ್ಮ ಕೃತಿಗಳ ಮೂಲಕ ಪ್ರತಿಬಿಂಬಿಸಿದ್ದಾರೆ” ಎಂದಿದ್ದಾರೆ.
ಮುಂದುವರೆದು, ಮಲಯಾಳಂ ಜೊತೆಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿಯೂ ಅವರು ಅದ್ಭುತ ಪಾತ್ರ ನಿರ್ವಹಿಸಿದ್ದಾರೆ. ವಿವಿಧ ಭಾಷೆಗಳಲ್ಲಿಯೂ ತಮ್ಮ ಕಲಾತ್ಮಕ ಸಾಮರ್ಥ್ಯ ತೋರಿಸಿರುವುದು ಭಾರತೀಯ ಸಿನಿರಂಗಕ್ಕೆ ನಿಜವಾದ ಆಸ್ತಿ. ಅವರ ಸಿನಿಮಾಗಳು ಹಾಗೂ ನಟನಾ ಪ್ರತಿಭೆ ಅನೇಕ ಪೀಳಿಗೆಯ ಕಲಾವಿದರಿಗೆ ಪ್ರೇರಣೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.
ಭಾರತೀಯ ಸಿನಿರಂಗದಲ್ಲಿ ಅತ್ಯುನ್ನತ ಗೌರವವೆಂದು ಪರಿಗಣಿಸಲ್ಪಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸಿನಿಮಾ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಕಲಾವಿದರಿಗೆ ನೀಡಲಾಗುತ್ತದೆ. ಭಾರತೀಯ ಸಿನಿಮಾದ ಪಿತಾಮಹನೆಂದು ಖ್ಯಾತರಾಗಿದ್ದ ದಾದಾಸಾಹೇಬ್ ಫಾಲ್ಕೆ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು 1969ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿ ವಿಜೇತರಿಗೆ ರೂ. 10 ಲಕ್ಷ ನಗದು, ಚಿನ್ನದ ಕಮಲ, ಶಾಲು ಮತ್ತು ಗೌರವ ಪತ್ರವನ್ನು ಪ್ರಧಾನ ಮಾಡಲಾಗುತ್ತದೆ.