ವಿಜಯಸಾಕ್ಷಿ ಸುದ್ದಿ, ಗದಗ
ಪ್ರೀತಿ ಮಾಡಿ ಮದುವೆಯಾದ ಜೋಡಿಯೊಂದು ಪೋಷಕರು ಜೀವ ಬೆದರಿಕೆ ಹಾಕ್ತಿದ್ದಾರೆ ಎಂದು ಆರೋಪಿಸಿ, ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮೊರೆ ಹೋಗಿದ್ದಾರೆ.
ಇಲ್ಲಿನ ರಾಜೀವ್ ಗಾಂಧಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಒಬ್ಬರ ಪುತ್ರಿ, ತನ್ನ ಪ್ರಿಯಕರನ ಜತೆಗೆ ಗದಗ ಎಸ್ಪಿ ಎನ್. ಯತೀಶ್ ಅವರನ್ನು ಭೇಟಿ ಮಾಡಿ, ರಕ್ಷಣೆ ಕೋರಿದ್ದಾಳೆ. ತಾಯಿ ಪಿಎಸ್ಐ ಆಗಿದ್ದು, ತಂದೆ ಅಗ್ನಿಶಾಮಕ ದಳದಲ್ಲಿ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಮ್ಮನ್ನು ಕೊಂದು ಬಿಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಕೀರ್ತಿನಾಥ ಸದಾಶಿವ ದಂಡಿನ (22) ಎಂಬ ಯುವಕನ ಜತೆಗೆ ಆರು ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಆದರೆ, ಯುವತಿಯ ತಂದೆ-ತಾಯಿ ಪೊಲೀಸ್ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಮಗೆ ರಕ್ಷಣೆ ಇಲ್ಲದಂತಾಗಿದೆ. ಎಲ್ಲಿ ನಮ್ಮಿಬ್ಬರನ್ನ ದೂರ ಮಾಡುತ್ತಾರೋ ಅನ್ನುವ ಭಯ ಕಾಡ್ತಿದೆ ಎಂದು ಆರೋಪಿಸಿದ್ದಾರೆ.
ಈ ಇಬ್ಬರೂ ಕಳೆದ 7 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರಂತೆ. ವಿಷಯ ಎರಡೂ ಮನೆಗಳಲ್ಲಿ ತಿಳಿದಿದ್ದರೂ ಅಂತರ್ಜಾತಿ ಮದುವೆಗೆ ವಿರೋಧವಿತ್ತು. ಹೀಗಾಗಿ ಕಳೆದ ಲಾಕ್‌ಡೌನ್ನಲ್ಲಿ ಯುವತಿಗೆ ಬೇರೆ ಕಡೆ ಸಂಬಂಧಕ್ಕೆ ಪ್ರಯತ್ನಿಸಿದ್ದರಂತೆ. ಆದರೆ, ಬೇರೆ ಹುಡುಗನನ್ನು ಮದುವೆಯಾಗಲು ಇಷ್ಟವಿಲ್ಲದ ಯುವತಿ ಪ್ರೀತಿಸಿದ ಯುವಕನ ಜೊತೆಗೆ ಮನೆ ಬಿಟ್ಟು ಹೋಗಿದ್ದರು.
ಡಿಸೆಂಬರ್ 2, 2020ರಂದು ಮದುವೆ ಮಾಡಿಕೊಂಡು ಬಳಿಕ ಮುಂಡರಗಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 2021ರ ಜನವರಿ 5ರಂದು ನೋಂದಣಿ ಮಾಡಿಸಿದ್ದರು. ಬಳಿಕ ಗೋವಾದಲ್ಲಿ ತಂಗಿದ್ದರು. ಆಗಲೇ ಇಬ್ಬರಿಗೂ ಪದೇ ಪದೇ ಬೆದರಿಕೆ ಕರೆಗಳು ಬರುತ್ತಿದ್ದವು. ಹೀಗಾಗಿ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದೆವು. ಈಗ ಊರಿಗೆ ಬರಬೇಕಾದ ಅನಿವಾರ್ಯ ಇದೆ. ಹೀಗಾಗಿ ನಮಗೆ ರಕ್ಷಣೆ ಕೊಡಿ ಅಂತ ಮನವಿ ಮಾಡಿಕೊಂಡಿದ್ದಾರೆ.
ಈ ಮೊದಲು ಬೆಳಗವಾವಿಗೆ ಹೋಗಿ ಐಜಿಯವರಲ್ಲಿ ರಕ್ಷಣೆ ಕೋರಿ ಮನವಿ ಮಾಡಿದ್ದರು. ಬಳಿಕ ಅಲ್ಲಿಂದ ಗದಗ ಎಸ್ಪಿಯವರಿಗೆ ರಕ್ಷಣೆ ಕೋರಿದ್ದಾರೆ. ಸದ್ಯ ಎಸ್ಪಿ ಮತ್ತು ಐಜಿಯವರು ರಕ್ಷಣೆ ಕೊಡುವುದಾಗಿ ಭರವಸೆ ನೀಡಿದ್ದಾರೆ.