ವಿಜಯಸಾಕ್ಷಿ ಸುದ್ದಿ, ಗದಗ: ಮನೆಯೇ ಮೊದಲ ಪಾಠಶಾಲೆ. ಶಾಲೆ ಎರಡನೇ ಮನೆಯಂತಿರಬೇಕು. ಶಿಕ್ಷಕರು ಹಾಗೂ ಪಾಲಕರು ಸಮನ್ವಯದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಂಗಳಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಅಮರೇಶ ಕೆ. ನಾಶಿ ಹೇಳಿದರು.
ಅವರು ನಗರದ ಮಂಗಳಾ ಎಜುಕೇಶನ್ ಟ್ರಸ್ಟ್‌ನ ಬಚಪನ್ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರ ಮತ್ತು ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಸಾಮರ್ಥ್ಯ, ಅವರಲ್ಲಿನ ನ್ಯೂನ್ಯತೆಗಳನ್ನು ಗುರುತಿಸಿ ಆಯಾ ವಲಯಗಳನ್ನು ಸುಧಾರಿಸುವುದು, ಪಾಲಕರು ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವುದು, ಶಿಕ್ಷಕರು ಪಾಲಕರ ಸಲಹೆ ಸೂಚನೆಗಳನ್ನು ಪರಿಗಣಿಸುವುದು, ಮಕ್ಕಳ ದೈನಂದಿನ ಕಾರ್ಯಚಟುವಟಿಕೆ, ಕಲಿಕೆ, ಅವರ ಉತ್ಸಾಹ, ಕ್ರಿಯಾತ್ಮಕತೆ, ಸೃಜನಶೀಲತೆ, ಕಲಿಕೆಯ ಸಾಮರ್ಥ್ಯವನ್ನು ನಿರ್ಧರಿಸುವುದು ಹೀಗೆ ಮಕ್ಕಳ ಶೈಕ್ಷಣಿಕ ಪ್ರಗತಿಯೊಂದಿಗೆ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ಬಹಳ ದೊಡ್ಡದಾಗಿದೆ. ಮಂಗಳಾ ಬಚಪನ್ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಶೈಕ್ಷಣಿಕ ಅಭಿವೃದ್ಧಿಗೆ ರಾಷ್ಟ್ರೀಯ ಪಠ್ಯಕ್ರಮದ ಪಂಚ ಸೂತ್ರಗಳನ್ನು ಪಾಲಿಸುತ್ತ, ಅವರನ್ನು ಯಶಸ್ಸಿನ ಹಾದಿಯಲ್ಲಿ ಮುನ್ನೆಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸರ್ವ ಪಾಲಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ವೇದಿಕೆಯ ಮೇಲೆ ಮಂಗಳಾ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಸರ್ವಮಂಗಳಾ ನಾಶಿ, ಸಂಯೋಜಕರಾದ ನೇತ್ರಾವತಿ ವೀಣೇಕರ್ ಉಪಸ್ಥಿತರಿದ್ದರು. ರೂಪಾ ಬೆಲ್ಲದಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.