ವಿಜಯಸಾಕ್ಷಿ ಸುದ್ದಿ, ಗದಗ: ಕುಟುಂಬವು ಮಗುವಿಗೆ ಪ್ರೀತಿ ಹಾಗೂ ಕಾಳಜಿಯನ್ನು ತೋರುವ ಆಶ್ರಯ ತಾಣವಾಗಿದ್ದು, ಕುಟುಂಬ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿ ಮಗುವಿನ ಹಕ್ಕು ಆಗಿದೆ ಎಂದು ಗದಗ ಜಯೆಂಟ್ಸ್ ಗ್ರೂಪ್ಸ್ ಆಫ್ ಸಖಿ-ಸಹೇಲಿಯ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.
ಅವರು ಬೆಟಗೇರಿಯ ಸೇವಾ ಭಾರತೀ ಟ್ರಸ್ಟ್ ‘ಅಮೂಲ್ಯ (ಪಿ)’ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ, ಸಖಿ-ಸಹೇಲಿಯ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ, ಪರಿತ್ಯಕ್ತ ಮಕ್ಕಳ ಸೇವೆಯಲ್ಲಿ ತಮ್ಮನ್ನು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿರುವ ದಾದಿಯರನ್ನು ಸನ್ಮಾನಿಸಿ ಮಾತನಾಡಿದರು.
ಸೇವಾ ಹಿ ಪರಮೋ ಧರ್ಮಃ ಎಂಬ ಧ್ಯೇಯದೊಂದಿಗೆ ಸೇವಾ ಭಾರತೀ ಟ್ರಸ್ಟ್ ನಿಜಕ್ಕೂ ಅಮೂಲ್ಯವಾದ ಸೇವೆ ಸಲ್ಲಿಸುತ್ತಿದೆ. ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳಿಗೆ ಈ ದತ್ತು ಸ್ವೀಕಾರ ಕೇಂದ್ರ ಮಮತೆಯ ತೊಟ್ಟಿಲು ಒದಗಿಸಿ, ಮಕ್ಕಳಿಗೆ ಆಸರೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಈ ಸಂಸ್ಥೆಯಲ್ಲಿ ದಾದಿಯರು ಹಾಗೂ ಸಿಬ್ಬಂದಿಗಳು ಗಮನಾರ್ಹ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇವರ ಸ್ವರೂಪವಾದ ಮಕ್ಕಳ ಲಾಲನೆ-ಪೋಷಣೆಗೆ ನಿಸ್ವಾರ್ಥ ಭಾವದಿಂದ ಶ್ರಮಿಸುವ ದಾದಿಯರ ಸೇವೆ ಅಮೂಲ್ಯವಾಗಿದೆ ಎಂದು ಅವರು ಬಣ್ಣಿಸಿದರು.
ಇನ್ನೊಬ್ಬ ಅತಿಥಿ ಸುಗ್ಗಲಾ ಯಳಮಲಿ ಮಾತನಾಡಿ, “ಬಾಲ್ಯವು ನಗುವಿನಲ್ಲಿ ಇರಬೇಕು. ಆದರೆ ಕೆಲವು ಮಕ್ಕಳು ಇದರಿಂದ ವಂಚಿತರಾಗಿದ್ದಾರೆ. ಅಂತಹ ಮಕ್ಕಳನ್ನು ಪ್ರೀತಿಯಿಂದ ಮಡಿಲಿನಲ್ಲಿ ಎತ್ತಿಕೊಂಡು, ಎತ್ತಿ ಆಡಿಸಿ ಬೆಳೆಸುವ ದಾದಿಯರು ನಿಜವಾದ ಮಾತೃ ಹೃದಯಿಗಳು” ಎಂದರು.
ಮಕ್ಕಳ ಆರೈಕೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ದಾದಿಯರಾದ:
ನೀಲವ್ವ ರೊಟ್ಟಿ, ಬಸವ್ವ ಶ್ಯಾವಿ, ಸರೋಜಾ ಕುಂದಗೋಳ, ಪಾರವ್ವ ಹಿರೇಮಠ, ಸುಂದರಾಬಾಯಿ ಅರವಟಗಿ, ಲಕ್ಷ್ಮವ್ವ ರೊಟ್ಟಿ, ಸುವರ್ಣಾ ಬಾರಕೇರ, ಸುಶೀಲಾ ಬಡಿಗೇರ, ಕಮಲಾಕ್ಷಿ ಸರಳಾ ಇವರನ್ನು ಸಂಘಟನೆಯ ಪದಾಧಿಕಾರಿಗಳು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೇಂದ್ರದ ಸಿಬ್ಬಂದಿಗಳಾದ ಪ್ರಮೋದ ಹಿರೇಮಠ, ಅಭಿಷೇಕ ಮಾಳೋದೆ, ಶ್ರೀಧರ ಕಾಂಬಳೆ ಉಪಸ್ಥಿತರಿದ್ದರು. ಚಂದ್ರಕಲಾ ಸ್ಥಾವರಮಠ ಪ್ರಾರ್ಥಿಸಿದರು. ರೇಖಾ ರೊಟ್ಟಿ ಸ್ವಾಗತಿಸಿ ವಂದಿಸಿದರು.
ಮುಖ್ಯ ಅತಿಥಿ ನಿರ್ಮಲಾ ಪಾಟೀಲ ಮಾತನಾಡಿ, “ಮಕ್ಕಳು ಪ್ರೀತಿ ಹಾಗೂ ವಾತ್ಸಲ್ಯದಿಂದ ಬೆಳೆದು ಸಮಾಜ ಗುರುತಿಸಿ ಗೌರವಿಸುವಂತಾಗಬೇಕು. ಆ ಪ್ರಯತ್ನವು ಈ ಕೇಂದ್ರದಲ್ಲಿ ನಿತ್ಯವೂ ನಡೆಯುತ್ತಿದೆ. ಮಕ್ಕಳ ಬದುಕಿಗೆ ಅರ್ಥಪೂರ್ಣ ಬೆಳಕು ತೋರುವ ಈ ಪ್ರಯತ್ನ ಸಫಲವಾಗಿದೆ” ಎಂದು ಹೇಳಿದರು.