ಬೆಂಗಳೂರು: ಪ್ರೇಯಸಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಲೋಕೇಶ್ವರ್ ನನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಲೋಕೇಶ್ವರ್ ತುಮಕೂರು ಜಿಲ್ಲೆಯ ಶಿರಾ ಮೂಲದ ರೇಖಾ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ಗಂಡನನ್ನು ಬಿಟ್ಟು ಎರಡು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದು,
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಮೃತ ರೇಖಾಗೆ ಆರೋಪಿ ಲೋಕೇಶ್ವರ್ ಪರಿಚಯವಾಗಿತ್ತು. ಸಲುಗೆ ಬೆಳೆದು ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಬಳಿಕ ರೇಖಾ ತಮ್ಮ ಕಂಪನಿಯಲ್ಲಿಯೇ ಲೋಕೇಶ್ಗೆ ಡ್ರೈವರ್ ಆಗಿ ಕೆಲಸ ಕೊಡಿಸಿದ್ದರು. ಅದಾದ ಬಳಿಕ ನಾಲ್ಕು ತಿಂಗಳ ಕಾಲ ಇಬ್ಬರು ಲಿವಿಂಗ್ ಟುಗೇದರ್ನಲ್ಲಿದ್ದರು. ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ಸ್ವಲ್ಪ ದಿನಗಳ ಬಳಿಕ ಲೋಕೇಶ್ವರ್ಗೆ ರೇಖಾ ಮೇಲೆ ಅನುಮಾನ ಶುರುವಾಗಿತ್ತು. ಅನೈತಿಕ ಸಂಬಂಧವಿದೆ ಎಂದು ಶಂಕಿಸಿ, ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಇಬ್ಬರು ಬೇರೆಯಾಗಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಲೋಕೇಶ್ವರ್ ರೇಖಾಳನ್ನು ಭೇಟಿಯಾಗಿ ಪ್ರಯತ್ನ ಪಟ್ಟಿದ್ದ.
ಆದರೆ ಸೋಮವಾರ ಮಾಗಡಿ ರಸ್ತೆಯ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ಲೋಕೇಶ್ವರ್ ರೇಖಾಗಾಗಿ ಕಾಯುತ್ತಿದ್ದ. ಆಕೆ ತನ್ನ ಮಗಳ ಜೊತೆಗೆ ಬರುತ್ತಿದ್ದಂತೆ ಸಾರ್ವಜನಿಕರ ಮಧ್ಯದಲ್ಲಿಯೇ 9 ಬಾರಿ ಚಾಕು ಇರಿದು ಪರಾರಿಯಾಗಿದ್ದನು. ತೀವ್ರ ರಕ್ತಸ್ರಾವವಾಗಿ ಕುಸಿದುಬಿದ್ದ ಮಹಿಳೆಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಆರೋಪಿಯನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.