ವಿಜಯಸಾಕ್ಷಿ ಸುದ್ದಿ, ಮುಳಗುಂದ: ರಾಜ್ಯದಲ್ಲಿ ಆರಂಭಗೊಂಡ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಗಣತಿ ಮೊಬೈಲ್ ಆ್ಯಪ್‌ನಲ್ಲಿ ತಾಂತ್ರಿಕ ದೋಷದಿಂದ ಗಣತಿದಾರರು ಪರದಾಡುತ್ತಿದ್ದಾರೆ. ಗಣತಿ ಮಾಡಬೇಕಾದ ಮನೆಗಳಿಗೆ ಅಂಟಿಸಿದ ಯುಎಚ್‌ಐಡಿ ಸಂಖ್ಯೆಗೂ ಆ ಮನೆಯಲ್ಲಿರುವ ಸದಸ್ಯರಿಗೂ ಬೇರೆ ಬೇರೆ ಸ್ಥಳ ಇರುವುದರಿಂದ ಗಣತಿದಾರರಿಗೆ ಒಂದರ ಮೆಲೊಂದರಂತೆ ಸಮಸ್ಯೆ ಉದ್ಭವಿಸಿ, ಗಣತಿ ಆಗದೇ ಕೈಕಟ್ಟಿಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ.
ಗಣತಿದಾರರಿಗೆ ಮೊಬೈಲ್ ನೆಟ್‌ವರ್ಕ್ ದೊಡ್ಡ ಸಮಸ್ಯೆಯಾಗಿದ್ದು, ನಿತ್ಯ ಒಂದು ಅಥವಾ ಎರಡು ಮನೆಗಳ ಗಣತಿ ಮಾಡಲೂ ಆಗದೇ ಶಿಕ್ಷಕರು ಪರದಾಡುತ್ತಿದ್ದಾರೆ. ಪ್ರತಿ ವರ್ಷ ದಸರಾ ರಜೆಯಿಂದ ಸ್ವಲ್ಪ ನಿರಾಳವಾಗಿ ಹಬ್ಬವನ್ನು ಆಚರಿಸುವ ಮೂಲಕ ಶಿಕ್ಷಕರು ಕೆಲವು ದಿನಗಳ ಬ್ರೇಕ್ ಪಡೆದು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಆದರೆ ಈ ವರ್ಷ ಶಿಕ್ಷಕರಿಗೆ ಈ ರೀತಿ ಶಿಕ್ಷೆ ಆಗಿರುವುದು ಒಂದೆಡೆಯಾದರೆ, 15 ದಿನಗಳಲ್ಲಿ 100ರಿಂದ 150 ಮನೆಗಳ ಗಣತಿ ಕಾರ್ಯ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.