ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬೆಳಕಿನ ಕಿರಣಗಳು ಕತ್ತಲನ್ನು ಹೊಗಲಾಡಿಸಿದಂತೆ ಅಜ್ಞಾನ, ಅಂಧಕಾರವನ್ನು ಹೊಡೆದೋಡಿಸುವ, ದೇವಾನುದೇವತೆಗಳ ಆರಾಧನೆಯ ದಿನಗಳನ್ನು ನವರಾತ್ರಿ ಎಂದು ಕರೆಯುತ್ತೇವೆ ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ಹೇಳಿದರು.
ಸಮೀಪದ ಕೋಚಲಾಪುರ ಗ್ರಾಮದ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಪ್ರಾರಂಭವಾದ ಪುರಾಣ ಉದ್ಘಾಟನೆಯನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಈ ನಾಡಿನ ವಿಶಿಷ್ಟ ಪರಂಪರೆಯಲ್ಲಿ ವಿವಿಧ ಧರ್ಮೀಯರು ವಿವಿಧ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದು, ಅವುಗಳೆಲ್ಲವೂ ಸಕಲ ಜೀವಾತ್ಮಗಳ ಪೂರಕವಾಗಿವೆ. ದೇವಿ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ಪರಿಪಾಲಿಸುವ ಶಕ್ತಿದಾತೆಯಾಗಿದ್ದಾಳೆ. ಅವಳ ಆರಾಧನೆಯಿಂದ ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಅಳವಡಿಸುವುದು ಈ ಹಬ್ಬದ ವಿಶೇಷತೆಯಾದರೆ, ಮುಂದಿನ ದೀಪಾವಳಿಯಲ್ಲಿ ಲಕ್ಷ್ಮಿ ಮತ್ತು ಸರಸ್ವತಿಯರನ್ನು ಪೂಜಿಸಿ ಧನ ಸಂಪತ್ತು ಹಾಗೂ ಮಕ್ಕಳಿಗೆ ವಿದ್ಯೆಯನ್ನು ಕಲ್ಪಿಸುವ ದೈವೀ ಸಂಕಲ್ಪವಾಗಿದೆ. ಈ ಎಲ್ಲ ದೇವತೆಗಳ ಸ್ಮರಣೆ ಮೂಲಕ ಪ್ರತಿಯೊಬ್ಬರಲ್ಲಿ ಮನಃಶಾಂತಿ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಡಾ. ಆರ್.ಕೆ. ಗಚ್ಚಿನಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಣ ಬೂದೀಶ್ವರ ಮಠದ ಡಾ. ವಿಶ್ವನಾಥ ಸ್ವಾಮಿಗಳು ಮೊದಲ ದಿನದ ದೇವಿ ಪುರಾಣದ ಅಧ್ಯಾಯವನ್ನು ಪಠಣ ಮಾಡಿದರು. ಗೂಳಯ್ಯ ಮಾಲಗಿತ್ತಿಮಠ, ಶಿವುನಗೌಡ ಅಯ್ಯನಗೌಡ್ರ ಮುಂತಾದವರು ಉಪಸ್ಥಿತರಿದ್ದರು. ಅಂದಾನಯ್ಯ ಹಾಲಕೆರಿಮಠ ನಿರ್ವಹಿಸಿದರು.