ವಿಜಯಸಾಕ್ಷಿ ಸುದ್ದಿ, ಗದಗ
ಘನತ್ಯಾಜ್ಯ ವಿಲೇವಾರಿ ಮಾಡಿದ ಬಿಲ್ ಮಾಡಿ ಕೊಡಲು ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದ ಗದಗ ಬೆಟಗೇರಿ ನಗರಸಭೆ ಎಇಇ ಬುಧವಾರ ಸಂಜೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
14 ಲಕ್ಷದ ರೂ. ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಅಬ್ದುಲ್ ಸಲಾಮ್ ಮನಿಯಾರ್ ಎಂಬುವರು, ಇಲ್ಲಿನ ಹೊಂಬಳ ರಸ್ತೆಯಲ್ಲಿನ ಹಳೆಯ ಕಸ ವಿಲೇವಾರಿ ಘಟಕದಿಂದ ಈಗಿನ ಬಳಗಾನೂರ ರಸ್ತೆಯಲ್ಲಿ ಇರುವ ಕಸ ವಿಲೇವಾರಿ ಘಟಕಕ್ಕೆ ಘನತ್ಯಾಜ್ಯ ಸಾಗಾಟ ಮಾಡಲು ಟೆಂಡರ್ ಪಡೆದು ಕೆಲಸ ಮುಗಿಸಿದ್ದರು ಎನ್ನಲಾಗಿದೆ.
ಆದರೆ ಕಮಿಷನ್ ಹಣ ಕೊಡದೇ ಬಿಲ್ ಪಾಸ್ ಮಾಡಲು ಹಿಂದೇಟು ಹಾಕಿದ ನಗರಸಭೆ ಎಇಇ ವರ್ಧಮಾನ್ ಎಸ್ ಹುದ್ದಾರ್ ಎಂಬುವವರು ನಗರಸಭೆಯಲ್ಲಿ ಇರುವ ಶೌಚಾಲಯದ ಬಳಿ ಇಂದು ಸಂಜೆ ಕಮಿಷನ್ ಹಣ 25 ಸಾವಿರ ರೂ.ಗಳನ್ನು ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.
ಬೆಂಗಳೂರು, ಧಾರವಾಡ ಜಿಲ್ಲೆಯಿಂದ ಬಂದಿರುವ ಎಸಿಬಿ ಅಧಿಕಾರಿಗಳು ಈ ಕಾರ್ಯಚರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಕಮಿಷನ್ ಹಣಕ್ಕಾಗಿ ಕೆಲವೊಂದಿಷ್ಟು ಅಧಿಕಾರಿಗಳು ಮಾತಾನಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಎಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ದಾಳಿ ನಗರಸಭೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡು ತಂದ ರಾಜಕಾರಣಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಎಸಿಬಿ ಡಿವೈಎಸ್ಪಿ ವೇಣುಗೋಪಾಲ, ಇನ್ಸ್‌ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೀರೇಶ್ ಹಳ್ಳಿ, ಧಾರವಾಡ ಇನ್ಸ್‌ಪೆಕ್ಟರ್ ಶೇಖ, ಸಿಬ್ಬಂದಿಗಳಾದ ಎಮ್ ಎಮ್ ಅಯ್ಯನಗೌಡ್ರ, ಆರ್ ಎಸ್ ಹೆಬಸೂರು, ನಾರಾಯಣಗೌಡ ತಾಯಣ್ಣವರ್, ವೀರೇಶ್ ಜೋಳದ, ಶರೀಫ್ ಮುಲ್ಲಾ, ಮಂಜು ಮುಳಗುಂದ, ಐ ಸಿ ಜಾಲಿಹಾಳ ಹಾಗೂ ಬಿಸಿನಳ್ಳಿ ಕಾರ್ಯಾಚರಣೆಯಲ್ಲಿದ್ದರು.