Home Gadag News ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಸಲ್ಲದು

ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಸಲ್ಲದು

0
ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಸಲ್ಲದು
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಸರಕಾರ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯಲ್ಲಿ ಬಣಜಿಗರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಬೇಕು. ಬಣಜಿಗರು ಬಸವಣ್ಣನವರ ಅನುಯಾಯಿಗಳಾಗಿದ್ದು, ನಮ್ಮ ಧರ್ಮ ಲಿಂಗಾಯತ ಆಗಿದೆ ಎಂದು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಹೇಳಿದರು.

ಅವರು ಬುಧವಾರ ಪಟ್ಟಣದ ಗುರುಭವನದಲ್ಲಿ ಜರುಗಿದ ರೋಣ ತಾಲೂಕಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ತಾಲೂಕಾ ಪತ್ತಿನ ಸಹಕಾರಿ ಸಂಘದ 31ನೇ ವಾರ್ಷಿಕ ಸರ್ವ ಸಾಧಾರಣ ಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಣಜಿಗ ಸಮುದಾಯ ಕಾಯಕದಲ್ಲಿ ನಂಬಿಕೆಯನ್ನು ಹೊಂದಿದ್ದು, ಕಾಯಕ ಮಾಡುವ ಮೂಲಕ ತಮ್ಮ ದೈನಂದಿನ ಜೀವನವನ್ನು ನಿರ್ವಹಿಸುತ್ತಾರೆ. ಬಸವಣ್ಣ ಕೂಡ ಕಾಯಕವೇ ಕೈಲಾಸ ಎಂದು ಸಾರಿದ್ದು, ಅವರ ಸಂದೇಶದಂತೆ ಬಣಜಿಗ ಸಮಾಜ ನಡೆಯುತ್ತಾ ಬಂದಿದ್ದಾರೆ. ರಾಜ್ಯಾದ್ಯಾಂತ ಬಣಜಿಗ ಸಮುದಾಯ ಧರ್ಮ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಬಣಜಿಗ ಎಂದು ಬರೆಸುವ ಮೂಲಕ ಬಸವ ತತ್ವಗಳನ್ನು ಉಳಿಸಬೇಕು ಎಂದರು.

ಈಗಾಗಲೇ ರಾಜ್ಯಾದ್ಯಾಂತ ಎಲ್ಲ ಜಿಲ್ಲೆಗಳ ಹಾಗೂ ತಾಲೂಕಿನಲ್ಲಿರುವ ಸಮಾಜದ ಮುಖಂಡರು ಲಿಂಗಾಯತ ಧರ್ಮ ಎಂದು ನಮೂದಿಸಲು ನಿರ್ಣಯ ಕೈಗೊಳ್ಳುವ ಕುರಿತು ಕರಪತ್ರಗಳನ್ನು ಹಂಚಿಕೆ ಮಾಡಿದ್ದಾರೆ. ಬಣಜಿಗ ಸಮುದಾಯ ಜಾಗೃತಿಗೊಳ್ಳಬೇಕು. ಮುಖ್ಯವಾಗಿ ನಮ್ಮ ಧರ್ಮ ಲಿಂಗಾಯತ ಆಗಿದೆ ಎನ್ನುವುದನ್ನು ನಾವು ಹೆಮ್ಮೆಯಿಂದ ಹೇಳಬೇಕು. ಸಮಾಜದ ಬಂಧುಗಳು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮುಖ್ಯವಾಹಿನಿಗೆ ತರಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಸಮಾಜದ ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಕಾರಣ ಮಾಡಬಾರದು. ಕಲ್ಯಾಣ ಮಂಟಪ ನಿರ್ಮಾಣಕ್ಕೆ ನಾನೊಬ್ಬನೇ ಅನುದಾನ ನೀಡಿಲ್ಲ. ಬದಲಾಗಿ ಶಿವಕುಮಾರ ಉದಾಸಿ, ಎಸ್.ವಿ. ಸಂಕನೂರ, ಕಳಕಪ್ಪ ಬಂಡಿ ಎಲ್ಲರೂ ತಮ್ಮ ಅಧಿಕಾರಾವಧಿಯಲ್ಲಿ ಅನುದಾನವನ್ನು ಕೊಟ್ಟಿದ್ದಾರೆ. ಸಮಾಜದ ಬಂಧುಗಳು ರಾಜಕೀಯ ಬಿಟ್ಟು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಮುತ್ತಣ್ಣ ಸಂಗಳದ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘದ ಅಧ್ಯಕ್ಷ ಸೋಮಲಿಂಗಪ್ಪ ಚರೇದ ವರದಿ ವಾಚನ ಮಾಡಿದರು. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಮಾಜಿ ಉಪಸಭಾಪತಿ ವೀರಣ್ಣ ಮತ್ತಿಕಟ್ಟಿ, ವೀರಣ್ಣ ಶೆಟ್ಟರ, ಸಂಗಪ್ಪ ಮೆಣಸಿನಕಾಯಿ, ಉಮೇಶ ಮೆಣಸಗಿ, ಶಿವಯೋಗಿ ಜಕ್ಕಲಿ, ರವಿ ಸಂಗನಶೆಟ್ಟರ, ಆನಂದ ಚಂಗಳಿ, ಶಿವು ಹುಲ್ಲೂರ, ಹುಚ್ಚೇಶ ಜವಳಿ, ಗುರುಪಾದಪ್ಪ ಪಟ್ಟಣಶೆಟ್ಟಿ, ಶರಣಪ್ಪನವರು ಜಕ್ಕಲಿ, ವಿಜಯಲಕ್ಷ್ಮಿ ಕೊಟಗಿ, ಶಕುಂತಲಾ ಐಹೊಳಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಬಣಜಿಗ ಸಮುದಾಯ ಮೊದಲಿನಿಂದಲೂ ಕಾಯಕವನ್ನು ನಂಬಿದವರು. ಅವರು ತಮ್ಮ ಕಾಯಕದಲ್ಲಿ ಬಸವ ತತ್ವಗಳನ್ನು ಅನುಸರಿಸುತ್ತಾ ಎಲ್ಲ ಧರ್ಮಗಳ ಜನರೊಂದಿಗೆ ಉತ್ತಮ ಸೌಹಾರ್ದತೆಯನ್ನು ಹೊಂದಿದ್ದಾರೆ. ಸಮಾಜದ ಕಾಯಕ ನಿಷ್ಠೆ ಮೆಚ್ಚುವಂತದ್ದು. ಸಮಾಜದ ಹಿರಿಯರ ಇಚ್ಛೆಯಂತೆ ಕಲ್ಯಾಣ ಮಂಟಪವನ್ನು ನಿರ್ಮಿಸಲು 1 ಕೋಟಿ ರೂ ಅನುದಾನವನ್ನು ನೀಡಲಾಗಿದ್ದು, ಈಗಾಗಲೇ ಅದರಲ್ಲಿ 25 ಲಕ್ಷ ರೂ ಬಿಡುಗಡೆಗೊಂಡಿದೆ.
ಜಿ.ಎಸ್. ಪಾಟೀಲ,
ಶಾಸಕರು, ರೋಣ.


Spread the love

LEAVE A REPLY

Please enter your comment!
Please enter your name here