ವಿಜಯಸಾಕ್ಷಿ ಸುದ್ದಿ, ಗದಗ: ಕೆಡುಕಿನ ವಿರುದ್ಧ ಒಳಿತಿನ ಗೆಲುವು ಆಗಬೇಕು ಎನ್ನುವುದು ಎಲ್ಲ ತತ್ವಗಳ ಸಂದೇಶವಾಗಿದೆ ಎಂದು ಮನಗೂಳಿಯ ಶ್ರೀ ವಿವೇಕಾನಂದ ಸೇವಾ ಕೇಂದ್ರದ ಪೂಜ್ಯಶ್ರೀ ಮೋಕ್ಷಪ್ರಾಣ ಮಾತಾಜಿ ಅವರು ಹೇಳಿದರು.
ಅವರು ನಗರದ ಎಪಿಎಂಸಿ ಆವರಣದಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶರನ್ನವರಾತ್ರಿ ಉತ್ಸವ–2025ರ ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಇತಿಹಾಸ ಅರಿತರೆ ಪ್ರೇರಣೆ ಹೆಚ್ಚಾಗುತ್ತದೆ. ನಮ್ಮ ವಿಚಾರಗಳನ್ನು ಉತ್ತಮವಾಗಿಟ್ಟುಕೊಂಡರೆ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ. ಜಗನ್ಮಾತೆ ಎಲ್ಲರನ್ನೂ ಕೈ ಹಿಡಿದಿರುತ್ತಾಳೆ. ಆದರೆ, ಯಾರಿಗೆ ತಾಯಿ ಕೈ ಹಿಡಿದಿದ್ದಾಳೆ ಎನ್ನುವುದು ಅರಿವಾಗುತ್ತದೆಯೋ ಅವರೇ ಪುಣ್ಯವಂತರಾಗುತ್ತಾರೆ ಎಂದು ಹೇಳಿದರು.
ಹರಿಹರದ ಸ್ವಾಮಿ ಶಾರದೇಶಾನಂದ ಅವರು ಮಾತನಾಡಿ, ಶಾರದಾ ಮಾತೆಯ ಕೃಪಾಶಿರ್ವಾದದಿಂದ ಜಗತ್ತಿನ 150 ದೇಶಗಳಲ್ಲಿ ಶ್ರೀರಾಮಕೃಷ್ಣ ಆಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ಮನುಷ್ಯರು ಅಹಂಕಾರ, ಕೋಪ, ತಾಪಗಳನ್ನು ತ್ಯಾಗ ಮಾಡಿದರೆ ಜೀವನದಲ್ಲಿ ನೆಮ್ಮದಿಯಾಗಿರುತ್ತಾರೆ. ನಮ್ಮ ಸಂಸ್ಕೃತಿಯು ದೂರಾಗುತ್ತಿರುವ ಇಂದಿನ ದಿನಗಳಲ್ಲಿ ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡುವುದು ಮುಖ್ಯವಾಗಿದೆ. ಜಗನ್ಮಾತೆಯು ಶುಂಭ–ನಿಶುಂಭ ಎಂಬ ರಾಕ್ಷಸರನ್ನು ಸಂಹಾರ ಮಾಡಿದಂತೆ ಬದುಕಿನಲ್ಲಿ ಎಲ್ಲವೂ ತನಗೆ ಬೇಕು, ತನ್ನದೇ ಆಗಬೇಕು ಎನ್ನುವ ಆಸೆಗಳನ್ನು ನಾವೇ ಸಂಹಾರ ಮಾಡಬೇಕಾಗಿದೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಸ್ವಾಮಿ ಜಗನ್ನಾಥಾನಂದ ಅವರು ಮಾತನಾಡಿ, ಜಗನ್ನಾತೆಯಲ್ಲಿ ಎಲ್ಲರೂ ಪೂರ್ಣವಾಗಿ ನಂಬಿಕೆ ಶ್ರದ್ದೆಯನ್ನು ಇಡಬೇಕು. ಶ್ರೀರಾಮಕೃಷ್ಣರು ಕಾಳಿ ಮಾತೆಯನ್ನು ಪೂಜಿಸುತ್ತ ತಮ್ಮ ಜೀವನವನ್ನು ಪಾವನಗೊಳಿಸಿದರು. ಅದರಂತೆ ನಮ್ಮಲ್ಲಿರುವ ದುಃಖ, ದಾರಿದ್ರ್ಯಗಳು ದೂರಾಗಬೇಕಾದರೆ ಜಗನ್ಮಾತೆಯಲ್ಲಿ ನಂಬಿಕೆ ಇಡಬೇಕು ಎಂದರು.
ಕಾರಟಗಿಯ ಸಂತೋಷ ಶಿಂಧೆ ಅವರಿಂದ ಆರಾತ್ರಿಕ ಮತ್ತು ಭಜನೆ ಜರುಗಿತು. ನಿವೃತ್ತ ಉಪನ್ಯಾಸಕ ಎಸ್.ಎಚ್. ದೇಶಪ್ಪನವರ ಕಾರ್ಯಕ್ರಮ ನಿರೂಪಿಸಿದರು.



