ಬುಧವಾರ ನಡೆದ ಏಷ್ಯಕಪ್ 2025ರ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ.
ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 168 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಪರ ಸೈಫ್ ಹಸನ್ 51 ಎಸೆತಗಳಲ್ಲಿ 69 ರನ್ ಬಾರಿಸಿದರು. ಇದಾಗ್ಯೂ ಬಾಂಗ್ಲಾದೇಶ್ ತಂಡ 127 ರನ್ಗಳಿಗೆ ಆಲೌಟ್ ಆಗುವ ಮೂಲಕ 41 ರನ್ಗಳಿಂದ ಸೋಲೊಪ್ಪಿಕೊಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ಜಾಕಿರ್ ಅಲಿ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 168 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು 41 ರನ್ಗಳಿಂದ ಸೋಲೊಪ್ಪಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ಇಬ್ಬರ ನಡುವೆ ಮೊದಲ ವಿಕೆಟ್‌ಗೆ 77 ರನ್‌ಗಳ ಪಾಲುದಾರಿಕೆ ಇತ್ತು. ಆದರೆ ಇವರಿಬ್ಬರ ಹೊರತುಪಡಿಸಿ ಭಾರತದ ಬ್ಯಾಟಿಂಗ್ ಕ್ರಮಾಂಕಕ್ಕೆ ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ. 37 ಎಸೆತಗಳಲ್ಲಿ 75 ರನ್ ಗಳಿಸಿದ ನಂತರ ಅಭಿಷೇಕ್ ಔಟಾದರು. ಇತ್ತ ಶುಭ್‌ಮನ್ ಗಿಲ್ 29 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 38 ರನ್ ಗಳಿಸಿದರು. ಬಾಂಗ್ಲಾದೇಶ ಪರ ರಿಷಾದ್ ಹುಸೇನ್ ಎರಡು ವಿಕೆಟ್ ಪಡೆದರೆ, ತಂಜಿಹ್ ಹಸನ್ ಸಕಿಬ್, ಮುಸ್ತಾಫಿಜುರ್ ರೆಹಮಾನ್ ಮತ್ತು ಮೊಹಮ್ಮದ್ ಸೈಫುದ್ದೀನ್ ತಲಾ ಒಂದು ವಿಕೆಟ್ ಪಡೆದರು.
ಟೀಂ ಇಂಡಿಯಾದ ಬ್ಯಾಟಿಂಗ್ ಬಲಿಷ್ಠವೆಂದು ಪರಿಗಣಿಸಲಾಗಿದ್ದರೂ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಬೌಲರ್‌ಗಳು. ಜಸ್ಪ್ರೀತ್ ಬುಮ್ರಾ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಉರುಳಿಸಿ ಬಾಂಗ್ಲಾಗೆ ಆಘಾತ ನೀಡಿದರು. ಉಳಿದಂತೆ ಮಧ್ಯಮ ಓವರ್‌ಗಳಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಬಾಂಗ್ಲಾ ಬ್ಯಾಟರ್ಗಳನ್ನು ಕಾಡಿದರು. ವರುಣ್ ಚಕ್ರವರ್ತಿ ಎರಡು ವಿಕೆಟ್‌ಗಳನ್ನು ಪಡೆದರೆ, ಕುಲ್ದೀಪ್ ಯಾದವ್ ಮೂರು ವಿಕೆಟ್‌ಗಳನ್ನು ಪಡೆದರು. ಈ ಇಬ್ಬರು ಬೌಲರ್‌ಗಳು ಎಂಟು ಓವರ್‌ಗಳಲ್ಲಿ 47 ರನ್‌ಗಳನ್ನು ನೀಡಿ ಬಾಂಗ್ಲಾದೇಶದ ಐದು ವಿಕೆಟ್‌ಗಳನ್ನು ಕಬಳಿಸಿದರು.
ಏಷ್ಯಾಕಪ್‌ನಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆದಿದ್ದು 12ನೇ ಬಾರಿಗೆ ಫೈನಲ್ ತಲುಪಿದೆ.



