ಕಳೆದ ಕೆಲ ದಿನಗಳ ಹಿಂದೆ ಕನ್ನಡ ಚಿತ್ರರಂಗದ ಸ್ಟಾರ್ ದಂಪತಿ ಉಪೇಂದ್ರ ಹಾಗೂ ಪ್ರಿಯಾಂಕ ದಂಪತಿ ಸೈಬರ್ ವಂಚಕರ ದಾಳಿಗೆ ಒಳಗಾಗಿದ್ದರು. ತಕ್ಷಣ ಎಚ್ಚೆತ್ತ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕೂಡಲೇ ಅಲರ್ಟ್ ಆದ ಪೊಲೀಸರು ಇದೀಗ ಹ್ಯಾಕ್ ಮಾಡಿದ ಗ್ಯಾಂಗ್ನನ್ನು ಪತ್ತೆ ಹಚ್ಚಿದ್ದಾರೆ. ಬಿಹಾರಿ ಗ್ಯಾಂಗ್ ಮೊದಲಿಗೆ ನಟಿ ಪ್ರಿಯಾಂಕ ಮೊಬೈಲ್ ಹ್ಯಾಕ್ ಮಾಡಿ ಆ ಬಳಿಕ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿರೋದು ತನಿಖೆಯಿಂದ ಗೊತ್ತಾಗಿದೆ.
ಮೊಬೈಲ್ ಹ್ಯಾಕ್ ಆಗಿರೋದು ತಿಳಿಯುತ್ತಿದ್ದಂತೆ ಪ್ರಿಯಾಂಕ ಹಾಗೂ ಉಪೇಂದ್ರ ಸದಾಶಿವನಗರ ಠಾಣೆಗೆ ದೂರು ದಾಖಲಿಸಿದ್ದರು. ಇದೀಗ ಘಟನೆ ನಡೆದು ಹತ್ತು ದಿನಗಳ ಬಳಿಕ ಪೊಲೀಸರು ಹ್ಯಾಕರ್ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ. ಇದು ಒಬ್ಬ ಹ್ಯಾಕರ್ ಮಾಡಿರೋ ಕೃತ್ಯವಲ್ಲ, ನಾಲ್ಕೈದು ಮಂದಿಯ ಬಿಹಾರಿ ಗ್ಯಾಂಗ್ ಮಾಡಿರೋ ಕೃತ್ಯ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹ್ಯಾಕರ್ಸ್ ನಟಿ ಪ್ರಿಯಾಂಕ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿ ಪಡೆದ ಹಣವನ್ನೂ ಬರೋಬ್ಬರಿ ನಾಲ್ಕು ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ₹1.65 ಲಕ್ಷ ಹಣವನ್ನು ಎಲ್ಲಾ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು ಕೊನೆಗೆ ನಳಂದಾ ಬ್ಯಾಂಕ್ಗೆ ಟ್ರಾನ್ಸಕ್ಷನ್ ಮಾಡಿದ್ದಾರೆ. *121*9279295167# ಸೇಮ್ ನಂಬರ್ ಬಳಸಿ ಆಂಧ್ರ ಹಾಗೂ ತಮಿಳುನಾಡು ಭಾಗದಲ್ಲಿ ಮೊಬೈಲ್ ಹ್ಯಾಕ್ ಮಾಡಲು ಯತ್ನಿಸಿರೋದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಸದ್ಯ ಪೊಲೀಸರ ಟೀಮ್ ಎಚ್ಚೇತು ಬಿಹಾರಕ್ಕೆ ಒಂದು ಸ್ಪೆಷಲ್ ಟೀಂ ಕಳಿಸಲು ಸೆಂಟ್ರಲ್ ಡಿಸಿಪಿ ಅಕ್ಷಯ್ ಮಚೀಂದ್ರ ಮುಂದಾಗಿದ್ದಾರೆ.
ಘಟನೆ ಹಿನ್ನೆಲೆ: ಪ್ರಿಯಾಂಕ ಅವರು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಹೋಮ್ ಪ್ರೊಡಕ್ಟ್ ಒಂದು ಆರ್ಡರ್ ಮಾಡಿದ್ದು, ಅದರ ಡೆಲಿವರಿಗಾಗಿ ಕಾಯುತ್ತಿದ್ದರಂತೆ. ಈ ವೇಳೆ ಹ್ಯಾಕರ್ಸ್ ಕರೆ ಮಾಡಿ *21*9279295167# ಎಂಬ ನಂಬರ್ ಕೊಟ್ಟು ಫೋನ್ ಮಾಡಿ ಎಂದು ಹೇಳಿದ್ದರಂತೆ.
ಇದನ್ನು ನಂಬಿ ಪ್ರಿಯಾಂಕ ಅವರು ಫೋನ್ ಮಾಡಿದಾಗ ಮೊಬೈಲ್ ಹ್ಯಾಕ್ ಆಗಿದೆ. ಅಲ್ಲದೇ ಪ್ರಿಯಾಂಕ ನಂತರ ನಟ ಉಪೇಂದ್ರ ಕೂಡಾ ಇದೇ ನಂಬರ್‌ಗೆ ಕರೆ ಮಾಡಲು ಟ್ರೈ ಮಾಡಿದ್ದರಂತೆ. ಆ ಸಂದರ್ಭದಲ್ಲಿ ಉಪೇಂದ್ರ ಅವರ ಮೊಬೈಲ್ ಕೂಡಾ ಹ್ಯಾಕ್ ಆಗಿದೆ.