ರಾಜ್ಯದ ವಿವಿಧ ಜಿಲ್ಲೆಗಳ 40 ಕಡೆ ಒಂಬತ್ತು ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂಭತ್ತು ಭೃಷ್ಟ ಅಧಿಕಾರಿಗಳಿಗೆ ಎಸಿಬಿ ಇಂದು ಬೆಳ್ಳಂಬೆಳಿಗ್ಗೆಯೇ ಬೆವರಿಳಿಸಿದೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳ 40 ಕಡೆ 9 ಅಧಿಕಾರಿಗಳಿಗೆ ಸೇರಿದ ಕಚೇರಿ, ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ತಡಕಾಡಿದ್ದಾರೆ.
ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತಕುಮಾರ್ ಸಿಂಗ್ ನೇತೃತ್ವದಲ್ಲಿ ಒಟ್ಟು 300 ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ಬಳ್ಳಾರಿ,ಬೀದರ್, ಕೋಲಾರ, ದಾವಣಗೆರೆ, ಮಂಗಳೂರು, ಶಿವಮೊಗ್ಗ, ಉಡಪಿ, ಬೆಂಗಳೂರು, ಮಂಡ್ಯ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಡಿವೈಎಸ್ಪಿ ಸೂರ್ಯನಾರಾಯಣ ನೇತೃತ್ವದಲ್ಲಿ ಬಳ್ಳಾರಿಯ ಜಿಸ್ಕಾಂನ ಎಲೆಕ್ಟ್ರಿಕ್ ಇನ್ಸ್ ಪೆಕ್ಟರ್ ಎ.ಎನ್.ವಿಜಯ್ ಕುಮಾರ್ ಅವರ ಅಹಂಬಾವಿಯಲ್ಲಿನ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
8 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಓರ್ವ ವಿಡಿಯೋಗ್ರಾಫರ್ ಜೊತೆಗೆ ಬೆಂಗಳೂರಿನಿಂದ ಆಗಮಿಸಿರುವ ಎಸಿಬಿ ಅಧಿಕಾರಿಗಳು ದಾಳಿಯ ಇಂಚಿಂಚೂ ವಿಡಿಯೋ ಫೋಟೊ ಶೂಟ್ ಮಾಡಿಕೊಂಡಿದ್ದಾರೆ. ದಾಳಿಯಲ್ಲಿ ಸ್ಥಳೀಯ ಎಸಿಬಿ ಅಧಿಕಾರಿಗಳನ್ನು ಬಳಸಿಕೊಂಡಿಲ್ಲ.
ಕೋಲಾರ ಜಿಲ್ಲೆಯ ಮಾಲೂರು ನಗರಸಭೆ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಎಚ್.ಆರ್. ಕೃಷ್ಣಪ್ಪ ಅವರ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿರುವ ಮನೆ, ಕೋಲಾರ ಜಿಲ್ಲೆಯ ಮಾಲೂರಿನಲ್ಲಿರುವ ಮನೆ ಹಾಗೂ ಬೆಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿರುವ ಮನೆ, ಕಚೇರಿ ಸೇರಿದಂತೆ 5 ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿಯ ದಾವಣಗೆರೆ ಎಸಿಪಿ ಎನ್.ಪಿ.ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದ ಜಿಪಂ ಜೆಇ ಸುರೇಶ್ ಮೋರೆ ಅವರಿಗೆ ಸೇರಿದ ಮೂರು ಸ್ಥಳಗಳ ಮೇಲೆ ಏಕಕಾಲಕ್ಕೆ ಕಲಬುರಗಿ ಎಸಿಬಿ ಎಸ್ಪಿ ಮಹೇಶ ಮೆಗ್ಗನ್ನವರ ಮಾರ್ಗದರ್ಶನದಲ್ಲಿ ಬೀದರ ಎಸಿಬಿ ಡಿಎಸ್ಪಿ ಹಣಮಂತರಾಯ ಮತ್ತು ತಂಡ ದಾಳಿ ನಡೆಸಿದೆ.
ಬಸವಕಲ್ಯಾಣದ ಶಿವಾಜಿ ನಗರದಲ್ಲಿರುವ ಮನೆ ಹಾಗೂ ಬಾಲ್ಕಿ ತಾಲೂಕಿನ ಮೆಹಕರ್ ನಲ್ಲಿರುವ ಪೆಟ್ರೊಲ್ ಬಂಕ್
ಹಾಗೂ ಮನೆಯ ಮೇಲೆ ದಾಳಿ ನಡೆಸಿ ದಾಖಲೆಗಳ ತಪಾಸಣೆ ಆರಂಭಿಸಿದ್ದಾರೆ.
ಮಂಗಳೂರಿನ ನಗರ ಅಭಿವೃದ್ಧಿ ಘಟಕದ ಇಂಜಿನಿಯರ್ ಜಿ.ಶ್ರೀಧರ್, ಉಡಪಿಯ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಇಂಜಿನಿಯರ್ ಕೃಷ್ಣ, ಕೆಆರ್ ಡಿಎಲ್ ಅಧಿಕಾರಿ, ಆರ್.ಪಿ. ಕುಲಕರ್ಣಿ, ಮಂಡ್ಯದ ಅರಣ್ಯ ಅಧಿಕಾರಿ ವೆಂಕಟೇಶ, ವಿಜಯಪುರ ಹೆಸ್ಕಾಂ ಇಂಜಿನಿಯರ್ ಸಿದ್ಧರಾಮ ಮಲ್ಲಿಕಾರ್ಜುನ, ಕೋರಮಂಗಲ ಆರ್ ಟಿಒ ಅಧಿಕಾರಿ ಕೃಷ್ಣಮೂರ್ತಿ ಅವರ ಕಚೇರಿ ಹಾಗೂ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಈ ಎಲ್ಲ ಅಧಿಕಾರಿಗಳ ವಿರುದ್ಧ ಭೃಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ ಐಆರ್ ದಾಖಲಿಸಲಾಗಿದೆ.