ವಿಜಯಸಾಕ್ಷಿ ಸುದ್ದಿ, ಗದಗ: ಸ್ವಚ್ಛ ಭಾರತ ಅಭಿಯಾನ ಮೊಟ್ಟಮೊದಲು ನಮ್ಮಿಂದಲೇ ಆರಂಭವಾಗಬೇಕು. ನಾವು ಮತ್ತೊಬ್ಬರಿಗೆ ಹೇಳುವ ಬದಲು ಮಾದರಿಯಾಗಬೇಕೆಂದು ವ್ಹಿಡಿಎಸ್‌ಟಿಸಿ ಬಾಲಕರ ಪ.ಪೂ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ ಹೇಳಿದರು.
ಅವರು ತಾಲೂಕಿನ ಅಡವಿಸೋಮಾಪೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಕೆವ್ಹಿಎಸ್‌ಆರ್ ಸಂಯುಕ್ತ ಪ.ಪೂ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡ ಎನ್‌ಎಸ್‌ಎಸ್ ಶಿಬಿರದ ಸ್ವಚ್ಛ ಭಾರತ ಅಭಿಯಾನ ಕುರಿತು ಉಪನ್ಯಾಸ ನೀಡಿದರು.
ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಹೊರಗಡೆಯಿಂದ ಬಿಸಿ ಪದಾರ್ಥಗಳನ್ನು ಮನೆಗೆ ತೆಗೆದುಕೊಂಡು ಹೋಗುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಪ್ರಜ್ಞಾವಂತರು, ಸುಶಿಕ್ಷಿತರಾದ ನಾವೆಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಕಸ, ಪ್ಲಾಸ್ಟಿಕ್‌ಗಳನ್ನು ಹಾಕುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಪೌರಕಾರ್ಮಿಕರಿಗೆ ಗೌರವವನ್ನು ನೀಡಬೇಕೆಂದು ತಿಳಿಸಿದರು.
ಪ್ರಾಚಾರ್ಯ ವ್ಹಿ.ಎಸ್. ದಲಾಲಿ, ಶಿಬಿರಾಧಿಕಾರಿ ಪ್ರದೀಪ ನಾಯಕ ಮಾತನಾಡಿದರು. ಉಪನ್ಯಾಸ ನೀಡಿದ ಪ್ರಾ. ಎಂ.ಸಿ. ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ ಸದಸ್ಯ ಮಲ್ಲಪ್ಪ ಅಸುಂಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆರ್.ಎನ್. ಭಂಡಾರಿ, ಗೋಣೆಪ್ಪ ದುರಗಣ್ಣವರ, ಗ್ರಂಥಪಾಲಕ ಲಕ್ಷ್ಮಣ ದೊಡ್ಡಮನಿ, ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಹನೀಫ್‌ಸಾಬ ಕುಮನೂರ, ರವಿ ಕಿರೆಸೂರ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ, ಗ್ರಾಮದ ಹಿರಿಯರು ಇದ್ದರು.
ತಾ.ಪಂ ಮಾಜಿ ಸದಸ್ಯ ಪ್ರಹ್ಲಾದ ಹೊಸಳ್ಳಿ ಮಾತನಾಡಿ, ನಮ್ಮ ಮನಸ್ಸು ಸ್ವಚ್ಛವಾಗಿದ್ದರೆ ಏನನ್ನಾದರೂ ಮಾಡಬಹುದು. ನಮ್ಮ ಮನಸ್ಸನ್ನು ಸ್ವಚ್ಛ ಮಾಡಿಕೊಂಡ ನಂತರ ಮನೆ, ಓಣಿ, ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶದ ಸ್ವಚ್ಛತೆಗೆ ಗಮನ ನೀಡಬೇಕು. ನಮಗೆ ಸಿಕ್ಕ ಅವಕಾಶದಲ್ಲಿ ಸ್ವಚ್ಛ ಭಾರತ ಯೋಜನೆಯಲ್ಲಿ ತೊಡಗಿಕೊಳ್ಳಬೇಕೆಂದು ಹೇಳಿದರು.



