ವಿಜಯಸಾಕ್ಷಿ ಸುದ್ದಿ, ಗದಗ: ಪ್ರಾಣಿಗಳಲ್ಲಿ ಧರ್ಮ ಮಾತ್ರ ಬೇರೆಯಿದೆ. ಉಳಿದಂತೆ ಪ್ರಾಣಿ ಮತ್ತು ಮನುಷ್ಯರಲ್ಲಿ ಆಹಾರ, ಸಂತಾನ ಮತ್ತು ಬದುಕಿನಲ್ಲಿ ವ್ಯತ್ಯಾಸವಿಲ್ಲ ಎಂದು ಮಾದಿನಳ್ಳಿಯ ಶ್ರೀರಾಮಕೃಷ್ಣ ಮಠದ ಸ್ವಾಮಿ ಧರ್ಮವೃತಾನಂದ ಅವರು ಹೇಳಿದರು.
ಅವರು ನಗರದ ಎಪಿಎಂಸಿ ಆವರಣದಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶರನ್ನವರಾತ್ರಿ ಉತ್ಸವ-2025ರ 2ನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಗು ಅಮ್ಮನ ಸೆರಗು ಹಿಡಿದು ಬೇಡಿಕೊಳ್ಳುವಂತೆ ಜಗನ್ಮಾತೆಯನ್ನು ಪೂಜೆ ಮತ್ತು ಪ್ರಾರ್ಥನೆಗಳಿಂದ ಬೇಡಿ ದೇವರ ದರ್ಶನ ಮಾಡಿಕೊಳ್ಳಬೇಕು. ಮನುಷ್ಯನು ಭಾವಜೀವಿಯಾಗಿದ್ದು, ಹೂವಿಗೆ ಸುಗಂಧದ ಭಾವವಿದ್ದಂತೆ, ಊಟಕ್ಕೆ ರುಚಿಯ ಭಾವವಿದ್ದಂತೆ ಮನುಷ್ಯನಿಗೆ ಆರಾಧನೆಯ ಭಾವವಿಲ್ಲದಿದ್ದರೆ ಅದು ಪೂಜೆ ಆಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮನ್ನೇ ತಾವು ಭಗವಂತನಲ್ಲಿ ಅರ್ಪಿಸಿಕೊಂಡು ಆರಾಧನೆ ಮಾಡುವದರಿಂದ ಜಗನ್ಮಾತೆಯು ಮೋಕ್ಷದ ಬಾಗಿಲನ್ನು ತೆರೆಯುತ್ತಾಳೆ ಎಂದು ಹೇಳಿದರು.
ಆಸೆ ಎಲ್ಲರಲ್ಲಿಯೂ ಇರಬೇಕು. ಆದರೆ, ಅತಿ ಆಸೆ ಇರಬಾರದು. ಇದು ನಮ್ಮ ಸತ್ವ ಬುದ್ಧಿಯನ್ನು ಹಾಳು ಮಾಡುತ್ತದೆ. ಪ್ರಾಣಿಗಳು ಹೊಟ್ಟೆ ತುಂಬುವಷ್ಟು ಬೇಟೆ ಆಡುತ್ತವೆ. ಆದರೆ, ಮನುಷ್ಯರು ನಾಲ್ಕು ತಲೆಮಾರುಗಳಷ್ಟು ಗಳಿಸಿದರೂ ಮತ್ತಷ್ಟು ಬೇಕು ಎಂದು ಆಸೆ ಪಡುತ್ತಾರೆ. ಅತಿ ಆಸೆ ದುಃಖಕ್ಕೆ ಮೂಲವಾಗುತ್ತದೆ. ಆದ್ದರಿಂದ ಆಸೆಯನ್ನು ಬೆಳೆಯಲು ಬಿಡಬಾರದು ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಸ್ವಾಮಿ ಜಗನ್ನಾಥನಂದ ಅವರು ಮಾತನಾಡಿ, ಜಗನ್ಮಾತೆಯನ್ನು ಒಲಿಸಿಕೊಳ್ಳುವದು ಸುಲಭವಾಗಿದೆ. ಆದರೆ, ಮನುಷ್ಯರು ನೂರಾರು ಕಲುಷಿತ ಭಾವನೆಗಳಲ್ಲಿ ಮುಳುಗಿ ಹೋಗಿರುವದರಿಂದ ಜಗನ್ಮಾತೆಯಿಂದ ದೂರಾಗುತ್ತಿದ್ದಾರೆ. ಪ್ರತಿದಿನ ಲಲಿತಾ ಸಹಸ್ರನಾಮಾವಳಿ ಪಠಿಸುವುದರಿಂದ ಶ್ರೀದೇವಿಯನ್ನು ಒಲಿಸಿಕೊಳ್ಳಬಹುದು ಎಂದು ಹೇಳಿದರು.
ನಿವೃತ್ತ ಉಪನ್ಯಾಸಕರಾದ ಎಸ್.ಎಚ್. ದೇಶಪ್ಪನವರ ಕಾರ್ಯಕ್ರಮ ನಿರೂಪಿಸಿದರು. ನಂತರ ಪ್ರಸಾದ ಸೇವೆ ಜರುಗಿತು.



