ಚಿಕ್ಕಮಗಳೂರು :-ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರಿಗೆ ಲೋಕಾಯುಕ್ತ ಸಂಕಷ್ಟ ಎದುರಾಗಿದೆ.
ಎಸ್, ಟಿ.ಡಿ ರಾಜೇಗೌಡ ಮತ್ತು ಕುಟುಂಬದ ವಿರುದ್ಧ ಲೋಕಾಯುಕ್ತ ಪೊಲೀಸರು FIR ದಾಖಲಿಸಿದ್ದಾರೆ. ಕಾಫಿ ಉದ್ಯಮಿ ದಿವಂಗತ ಸಿದ್ದಾರ್ಥ ಹೆಗಡೆಗೆ ಸೇರಿದ ಕಾಫಿ ತೋಟ ಖರೀದಿಯೇ ಶಾಸಕನ ಕುಟುಂಬಕ್ಕೆ ಮುಳುವಾಗಿದೆ.
ಹಾಸನ ಹಾಗೂ ಚಿಕ್ಕಮಗಳೂರು ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇರೆಗೆ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಶಾಸಕರು ಖರೀದಿಸಿರುವ ಕಾಫಿ ತೋಟದಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಏನಿದು ಕೇಸ್?
ಟಿ.ಡಿ. ರಾಜೇಗೌಡ 2018ರಲ್ಲಿ ಮೊದಲ ಬಾರಿಗೆ ಶಾಸಕರಾದಾಗ 34 ಲಕ್ಷ ರೂಪಾಯಿ ಆದಾಯ ತೋರಿಸಿದ್ದರು. 2023ರಲ್ಲಿ ಈ ಆದಾಯವನ್ನು 44 ಲಕ್ಷ ಎಂದು ಘೋಷಿಸಿದ್ದರು. ಆದರೆ, 123 ಕೋಟಿ ಬ್ಯಾಂಕ್ ಸಾಲ ಹೊಂದಿದ್ದ ಸ್ಥಿತಿಯಲ್ಲಿ 266 ಎಕರೆ ಕಾಫಿ ತೋಟವನ್ನು ಖರೀದಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಶಾಸಕ ರಾಜೇಗೌಡ ತೋಟ ಖರೀದಿ ಮಾಡಿದ್ದ ವಿಷಯವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಅಫಿಡವಿಟ್ನಲ್ಲಿ ಉಲ್ಲೇಖಿಸಿಲ್ಲ ಎಂಬ ಆರೋಪ ಕೇಳಿ ಬಂದಿದ್ದರಿಂದ FIR ದಾಖಲಾಗಲು ಪ್ರಮುಖ ಕಾರಣವಾಗಿದೆ. ಶಾಸಕ ರಾಜೇಗೌಡ ಪತ್ನಿ ಪುಷ್ಪ ಹಾಗೂ ಪುತ್ರ ಅರ್ಪಿತ್ ರಾಜದೇವ್ ಅವರ ಹೆಸರಿನಲ್ಲಿ ಶೇ. 33ರಷ್ಟು ಹಂಚಿಕೆಯಾಗಿ ಕಾಫಿ ತೋಟ ನೋಂದಾಯಿಸಲಾಗಿದೆ. ಅಲ್ಲದೇ ಸಾಲದ ವಿವರಗಳು ಉಪನೊಂದಣಿ ಕಚೇರಿಯ ದಾಖಲೆಗಳಲ್ಲಿ ಬಹಿರಂಗಗೊಂಡಿವೆ. ಈ ಕುರಿತು ಬಿಜೆಪಿ ಕಾರ್ಯಕರ್ತ ದಿನೇಶ್ ಹೊಸೂರು ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಅಕ್ರಮ ಆದಾಯ, ಭ್ರಷ್ಟಾಚಾರ ಮತ್ತು ಬ್ಯಾಂಕ್ ಸಾಲವನ್ನು ಮರೆಮಾಚಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು.



