ಆಹಾರ ಇಲಾಖೆ ಕಚೇರಿಯೆದುರು ಸೆ.29ಕ್ಕೆ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ರಾಜ್ಯಾದಂತ 8 ಲಕ್ಷಕ್ಕೂ ಹೆಚ್ಚು ಬಡವರ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಏಕಾಏಕಿಯಾಗಿ ರದ್ದುಗೊಳಿಸಿದ್ದರಿಂದ ಲಕ್ಷಾಂತರ ಬಡ ಕುಟುಂಬಗಳು ಬೀದಿಗೆ ಬಂದಿದ್ದಾರೆ. ಗದಗ-ಬೆಟಗೇರಿ ಶಹರದ 2304 ಕಾರ್ಡ್‌ಗಳು ಮತ್ತು ಗದಗ ಗ್ರಾಮೀಣ ಭಾಗದ 1478 ಕಾರ್ಡ್‌ಗಳನ್ನು ರದ್ದುಗೊಳಿಸಿದ್ದಾರೆ. ರಾಜ್ಯ ಸರ್ಕಾರದ ಇಂತಹ ಜನವಿರೋಧಿ ಕ್ರಮವನ್ನು ಖಂಡಿಸಿ ಸ್ಲಂ ಜನಾಂದೋಲನ-ಕರ್ನಾಟಕ ಸಹಕಾರದಲ್ಲಿ ಸೆ.29ರಂದು ಆಹಾರ ಇಲಾಖೆ ಕಚೇರಿಯೆದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆಯಂತೆ ಅನರ್ಹ ಪಡಿತರ ಚೀಟಿಗಳನ್ನು ಮಾತ್ರ ರದ್ದುಗೊಳಿಸಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಉಳ್ಳವರ ಪಡಿತರ ಚೀಟಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿ ರದ್ದುಗೊಳಿಸಲಿ. ಆದರೆ ಅಧಿಕಾರಿಗಳು ಯಾವುದೇ ಸಮೀಕ್ಷೆಯನ್ನು ನಡೆಸದೇ, ಮುಂಚಿತವಾಗಿ ಫಲಾನುಭವಿಗಳಿಗೆ ನೋಟಿಸ್ ನೀಡದೇ ಏಕಾಏಕಿಯಾಗಿ ಸಾವಿರಾರು ಕಾರ್ಡ್‌ಗಳನ್ನು ರದ್ದುಗೊಳಿಸಿರುವ ಕ್ರಮ ಖಂಡನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಸಲೀಂ ಹರಿಹರ, ಮಂಜುನಾಥ ಶ್ರೀಗಿರಿ, ಮಕ್ತುಮಸಾಬ ಮುಲ್ಲಾನವರ, ರವಿ ಗೋಸಾವಿ ಮುಂತಾದವರು ಉಪಸ್ಥಿತರಿದ್ದರು.

ಒಂದು ವೇಳೆ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಡ್‌ಗಳನ್ನು ರದ್ದುಗೊಳಿಸಬೇಕಾದರೆ ಫಲಾನುಭವಿಗಳಿಗೆ ನೋಟಿಸ್ ನೀಡಿ ದಾಖಲೆಗಳನ್ನು ಪರಿಶೀಲನೆ ಮಾಡುವ ಅವಕಾಶ ನೀಡಬೇಕಾಗಿತ್ತು. ಆದರೆ ಆಹಾರ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಸರ್ಕಾರದ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಸಾವಿರಾರು ಬಡ ಕುಟುಂಬಗಳ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದಾರೆ. ಈಗಾಗಲೇ ರದ್ದುಗೊಂಡಿರುವ ಕಾರ್ಡ್‌ಗಳನ್ನು ಪುನಃ ಪುನರ್ನವೀಕರಿಸಲು ಆಗ್ರಹಿಸಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಇಮ್ತಿಯಾಜ್ ಮಾನ್ವಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here