ಮಂಡ್ಯ:- ಕೃಷ್ಣರಾಜ ಸಾಗರ ಅಣೆಕಟ್ಟು ಬೃಂದಾವನ ಉದ್ಯಾನದ ಆವರಣದಲ್ಲಿ ಶುಕ್ರವಾರ ನಡೆದ ಐತಿಹಾಸಿಕ ಕಾವೇರಿ ಆರತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದರು.
10 ಸಾವಿರಕ್ಕೂ ಹೆಚ್ಚು ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಮೊದಲಿಗೆ ದಕ್ಷಿಣ ಭಾರತ ಶೈಲಿಯಲ್ಲಿ ಸ್ಥಳೀಯ ಪುರೋಹಿತರ ತಂಡ ಆರತಿ ಬೆಳಗಿತು. ಆನಂತರ ವಾರಣಾಸಿಯಿಂದ ಬಂದಿದ್ದ 13 ಜನ ಪುರೋಹಿತರ ತಂಡ ಆರತಿ ಬೆಳಗಿತು. ನಾಡಿನ ಜೀವನದಿ, ನಮ್ಮೆಲ್ಲರ ತಾಯಿ ಕಾವೇರಿಗೆ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆರತಿ ಬೆಳಗುವ ಈ ದಿವ್ಯ ಕ್ಷಣವು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ನಡೆಯುವ ಗಂಗಾ ಆರತಿಯನ್ನೇ ಮೀರಿಸುವಂತೆ ಭಾವಿಸಿತು.
ಆರತಿಯನ್ನು ಬರೀ ಧಾರ್ಮಿಕ ಕಾರ್ಯಕ್ರಮವಾಗಿ ರೂಪಿಸಿಲ್ಲ:
“ಕಾವೇರಿ ಆರತಿಯನ್ನು ಬರೀ ಧಾರ್ಮಿಕ ಕಾರ್ಯಕ್ರಮವಾಗಿ ರೂಪಿಸಿಲ್ಲ. ನಮ್ಮೆಲ್ಲರನ್ನು ಕಾಪಾಡುವ ಕಾವೇರಿ ತಾಯಿಗೆ ಗೌರವ ಸಲ್ಲಿಸುವ, ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮವಾಗಿ ರೂಪಿಸಿದ್ದೇವೆ. ಇದನ್ನು ಯಾವುದೇ ತೊಂದರೆ ಬಂದರೂ ನಿಲ್ಲಿಸಲು ಸಾಧ್ಯವಿಲ್ಲ ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
“ಹೆತ್ತತಾಯಿಗೆ ಗೌರವ ನೀಡುತ್ತಿರುವಂತೆ ತುತ್ತು ನೀಡುವ ತಾಯಿಗೆ ಶುಭ ಲಗ್ನ, ಶುಭ ಗಳಿಗೆಯಲ್ಲಿ ನಮನ ಸಲ್ಲಿಸುತ್ತಿದ್ದೇವೆ. ದೇಹದಲ್ಲಿ ರಕ್ತ ಹರಿದರೆ ಶಕ್ತಿ, ಈ ರಕ್ತಕ್ಕೆ ಶಕ್ತಿ ನೀಡುವುದು ಕಾವೇರಿ ತಾಯಿ ನೀರು. ಈ ತಾಯಿಗೆ ಪೂಜೆ ಮಾಡುವುದೇ ಮನಸ್ಸಿಗೆ ನೆಮ್ಮದಿ, ಕಣ್ಣಿಗೆ ಹಬ್ಬ. ಕನ್ನಡಿಗರ ಭಾಗ್ಯ ದೇವತೆ, ರೈತರ ಜೀವದಾತೆ ಕಾವೇರಿ ಮಾತೆ” ಎಂದು ಬಣ್ಣಿಸಿದರು.
“ಸೂರ್ಯ, ಚಂದ್ರ, ಗಾಳಿಯಿಲ್ಲದೇ ನಾವುಗಳು ಬದುಕಲು ಸಾಧ್ಯವಿಲ್ಲ. ಪಂಚಭೂತಗಳಿಗೆ ಪ್ರತಿದಿನ ನಾವು ಪೂಜೆ ಮಾಡುತ್ತೇವೆ. ಅದೇ ರೀತಿ ರಾಜ್ಯದ ಹಳೇ ಮೈಸೂರು ಭಾಗದ ಜೀವನದಿಯಾಗಿ ಮೂರುವರೆ ಕೋಟಿ ಜನರು ಸೇರಿದಂತೆ ಪಕ್ಕದ ತಮಿಳುನಾಡು, ಪಾಂಡಿಚೇರಿಯ ಜನರಿಗೆ ಜೀವನಾಧಾರವಾದ ಕಾವೇರಿಗೆ ನಾವು ಪೂಜೆ ಸಲ್ಲಿಸುತ್ತಿದ್ದೇವೆ. ಇಂದು ಬೆಳಗಿರುವ ಜ್ಯೋತಿ ಇಡೀ ರಾಜ್ಯವನ್ನು ಶಾಶ್ವತವಾಗಿ ಬೆಳಗುತ್ತದೆ ಎಂದರು.