ವಿಜಯಸಾಕ್ಷಿ ಸುದ್ದಿ, ಗದಗ: ಅನಾವಶ್ಯಕ ವಿಷಯಗಳಿಗೆ ಗಮನ ನೀಡದೆ, ಪುಸ್ತಕ ಓದುವುದಕ್ಕೆ ಹೆಚ್ಚಿನ ಸಮಯವನ್ನು ನೀಡಬೇಕೆಂದು ಪ್ರೊ. ಬಾಹುಬಲಿ ಜೈನರ್ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಜರುಗಿದ ಉಪನ್ಯಾಸ ಸಮಾರಂಭದಲ್ಲಿ `ರಾಷ್ಟ್ರೀಯ ನಿರ್ಮಾಣದಲ್ಲಿ ಯುವಕರ ಪಾತ್ರ’ ವಿಷಯದ ಕುರಿತು ಮಾತನಾಡಿದರು.
ನಮ್ಮ ಹಿರಿಯರು ಹಾಕಿಕೊಟ್ಟ ಪದ್ಧತಿ ಮತ್ತು ವೈಜ್ಞಾನಿಕ ಕಾರಣಗಳು ಹಾಗೂ ಗ್ರಾಮೀಣ ಭಾಗದ ಜೀವನಶೈಲಿ ಮರೆಯದೆ ನಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಜೀವನ ಮೌಲ್ಯಗಳು, ಆತ್ಮವಿಶ್ವಾಸ, ನಮ್ಮನ್ನು ನಾವು ಗೌರವಿಸಿಕೊಳ್ಳುವ ಮೂಲಕ ಪ್ರಾಮಾಣಿಕವಾದ ಜೀವನ ನಮ್ಮದಾಗಬೇಕೆಂದು ಹೇಳಿದರು.
ನಾಯಕ ಅಂದರೆ ದೊಡ್ಡ ದೊಡ್ಡ ವ್ಯಕ್ತಿಯಾಗುವುದು ಅಲ್ಲ. ಮತ್ತೊಬ್ಬರ ಬಗೆಗೆ ಕೊಟ್ಟೆಕಿಚ್ಚು ಪಡದೆ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಆರಾಮವಾಗಿ ಇರಬೇಕಾದರೆ ಕೆಟ್ಟ ಆಲೋಚನೆಯನ್ನು ಬಿಡಬೇಕು ಎಂದರಲ್ಲದೆ, ನೂರಾರು ಸಸಿಗಳನ್ನು ನೆಟ್ಟು ಬೆಳೆಸಿದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ಹಾಡಿನ ಮೂಲಕ ವಿವರವಾಗಿ ತಿಳಿಸಿದರು.
ಯುವ ಪೀಳಿಗೆ ಮತ್ತು ಯುವಕರ ಸರ್ವತೋಮುಖ ಅಭಿವೃದ್ಧಿಯಲ್ಲಿ ದೇಶದ ಭವಿಷ್ಯ ಅಡಗಿದೆ. ಯುವಕರು ಉತ್ಸಾಹಿಗಳಾಗಿ, ಉತ್ತಮ ಕೌಶಲ್ಯವನ್ನು ಹೊಂದಬೇಕೆಂದು ಹೇಳಿದರು.
ಶಿಬಿರಾಧಿಕಾರಿ ಪ್ರದೀಪ ನಾಯಕ, ವೀರೇಶ ಅಂಗಡಿ ಮಾತನಾಡಿ, ಸಾಧಿಸುವವರಿಗೆ ಸಾಕಷ್ಟು ಸಮಸ್ಯೆಗಳು ಅಡ್ಡಿಯಾಗುತ್ತವೆ. ಅವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಉಮೇಶ ಹಿರೇಮಠ, ಪ್ರೊ. ಬಾಹುಬಲಿ ಜೈನರ್, ಶಿವಾನಂದ ಕೊರವರ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನವೀನ ಕುಂಬಾರ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ, ಗ್ರಾಮದ ಹಿರಿಯರು ಇದ್ದರು.


