ವಿಜಯಸಾಕ್ಷಿ ಸುದ್ದಿ, ಗದಗ: ಗಸೇವಾಭಾರತಿ ಸಂಸ್ಥೆಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರವು ಪರಿತ್ಯಕ್ತ ಮಕ್ಕಳನ್ನು ಸಂರಕ್ಷಿಸಿ ಪೋಷಣೆ ಮಾಡುವ ಮೂಲಕ ಅಮೂಲ್ಯವಾದ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ ಎಂದು ಗದುಗಿನ ತಜ್ಞ ವೈದ್ಯ ಡಾ. ಪ್ರಕಾಶ ಸಂಕನೂರ ಅಭಿಪ್ರಾಯಪಟ್ಟರು.
ಅವರು ಬೆಟಗೇರಿಯ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಪೋಷಣೆಗೊಂಡ ಮಗುವನ್ನು ಮಕ್ಕಳಿಲ್ಲದ ದಂಪತಿಗೆ ದತ್ತುಪೂರ್ವ ಪೋಷಣೆಗೆ ಹಸ್ತಾಂತರಿಸಿ ಮಾತನಾಡಿದರು.
ಮಗುವನ್ನು ದತ್ತು ಪಡೆದ ಪಾಲಕರು ಈ ಮಗುವಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ, ಸಂಸ್ಕೃತಿಯನ್ನು ನೀಡಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂದರಲ್ಲದೆ, ಅಮೂಲ್ಯ ಕೇಂದ್ರದ ಅಮೂಲ್ಯ ಸೇವೆಯನ್ನು ಬಣ್ಣಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಡಾ. ಶ್ವೇತಾ ಪ್ರಕಾಶ ಸಂಕನೂರ ಮಾತನಾಡಿ, ಇದು ಮನಕಲಕುವ ಹಾಗೂ ಭಾವುಕತನವನ್ನುಂಟುಮಾಡುವ ಸನ್ನಿವೇಶವಾಗಿದ್ದು, ಮಗುವಿಗೆ ಉತ್ತಮ ಭವಿಷ್ಯ ರೂಪಿತಗೊಳ್ಳಲಿ ಎಂದರು.
ಮಗುವನ್ನು ದತ್ತು ಪಡೆದ ದಾವಣಗೆರೆಯ ರಾಜಕುಮಾರ ಮಾತನಾಡಿ, ಮಕ್ಕಳಿಲ್ಲದ ಕೊರಗಿನಲ್ಲಿದ್ದ ನಮಗೆ ಅಮೂಲ್ಯ ದತ್ತು ಕೇಂದ್ರದಿಂದ ಕಾನೂನಿನ ಪ್ರಕಾರ ಮಗುವನ್ನು ನಮ್ಮ ಮಡಿಲಿಗೆ ಹಾಕಿರುವದು ಸಂತಸ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿದರು. ಸಮಾರಂಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜಯದೇವಿ ಕವಲೂರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಭಾರಿ ಗಿರಿಜಾ ದೊಡ್ಡಮನಿ, ರಮೇಶ್ ಕಳ್ಳಿಮನಿ, ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಲಕ್ಷ್ಮೀ ಬಾಗೇವಾಡಿ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಸುಪರ್ಣ ಬ್ಯಾಹಟ್ಟಿ, ರಾಜೇಶ್ ಖಟವಟೆ, ನಾಗವೇಣಿ ಕಟ್ಟಿಮನಿ, ಗುರುಸಿದ್ಧಪ್ಪ ಕೊಣ್ಣೂರ, ಚನ್ನವೀರಪ್ಪ ಚನ್ನಪ್ಪನವರ, ಪ್ರಮೋದ ಹಿರೇಮಠ, ಅಭಿಷೇಕ ಮಾಳೋದೆ, ಶ್ರೀಧರ ಕಾಂಬಳೆ ಉಪಸ್ಥಿತರಿದ್ದರು.
ಅರುಣ ರಾಜಪುರೋಹಿತ ನಿರೂಪಿಸಿದರು, ನರಸಿಂಹ ಕಾಮಾರ್ತಿ ವಂದಿಸಿದರು.



