ನವದೆಹಲಿ: ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಟೀಮ್ ಇಂಡಿಯಾ ಬಗ್ಗು ಬಡಿದಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಮತ್ತೊಮ್ಮೆ ಏಷ್ಯನ್ ಚಾಂಪಿಯನ್ ಎನಿಸಿಕೊಂಡಿದೆ.
ವಿಶೇಷ ಎಂದರೆ ಈ ಬಾರಿ ಭಾರತ ತಂಡ ಪಾಕ್ ಪಡೆಯನ್ನು ಮೂರು ಬಾರಿ ಸೋಲಿಸಿದೆ. ಮೊದಲ ಸುತ್ತಿನ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಸುತ್ತಿನಲ್ಲಿ 6 ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಇದೀಗ ಫೈನಲ್ನಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದೆ.
ಇನ್ನೂ ಪಾಕಿಸ್ತಾನದ ವಿರುದ್ಧ ಜಯಗಳಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಆಪರೇಷನ್ ಸಿಂಧೂರಕ್ಕೆ ಹೋಲಿಸಿ ಭಾರತ ತಂಡವನ್ನು ಅಭಿನಂದಿಸಿದ್ದಾರೆ. “ಕ್ರೀಡಾ ಮೈದಾನದಲ್ಲಿ ಆಪರೇಷನ್ ಸಿಂಧೂರ – ಫಲಿತಾಂಶ ಒಂದೇ, ಭಾರತಕ್ಕೆ ಜಯ” ಎಂದು ಬರೆದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಭಾರತ ನಡೆಸಿದ ಕಾರ್ಯಾಚರಣೆಗೆ `ಆಪರೇಷನ್ ಸಿಂಧೂರ’ ಹೆಸರನ್ನು ಇಟ್ಟಿತ್ತು. ಈಗ ತಿಲಕ್ ವರ್ಮಾ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ 5 ವಿಕೆಟ್‌ಗಳ ಜಯ ಸಾಧಿಸಿ 9ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.



