ವಿಜಯಸಾಕ್ಷಿ ಸುದ್ದಿ, ಗದಗ: ನವರಾತ್ರಿ ಹಬ್ಬದಲ್ಲಿ ದುರ್ಗಾ ದೇವಿಯ 9 ಅವತಾರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಆರಾಧನೆಯು ಪುರಾಣ ಕಥೆಯ ಅನುಸಾರವಾಗಿ ದುಷ್ಟ ಮಹಿಷಾಸುರನ ಸಂಹಾರಕ್ಕಾಗಿ ದೇವಿ ಹೇಗೆ ಅವತಾರ ತಾಳಿದಳೋ ಅದೇ ಅನುಕ್ರಮದಲ್ಲಿ ನಡೆಯುತ್ತದೆ ಎಂದು ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಹೇಳಿದರು.
ನಗರದ ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದ ಶ್ರೀಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ದಸರಾ ಮಹೋತ್ಸವ ಮತ್ತು ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವರಾತ್ರಿಯ ವ್ರತಾಚರಣೆಯ 5ನೇ ದಿನ ಆರಾಧನೆಗೆ ಪಾತ್ರವಾಗುವ ಜಗನ್ಮಾತೆಯ ಸ್ವರೂಪವೇ ಸ್ಕಂದಮಾತೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಸ್ಕಂದಮಾತೆಯು ತಾಯಿ ಪಾರ್ವತಿಯ ಒಂದು ರೂಪ. ದೇವತೆಗಳ ಸೇನಾಧಿಪತಿಯಾದ ಕುಮಾರ ಕಾರ್ತಿಕೇಯನಿಗೆ (ಸ್ಕಂದ) ತಾಯಿಯಾದ್ದರಿಂದಲೇ ಆಕೆಗೆ ಈ ಹೆಸರು ಬಂದಿದೆ ಎಂದರು.
ಒಂದು ಕಥೆಯ ಪ್ರಕಾರ, ತಾಯಿ ಪಾರ್ವತಿಯು ಕೋಪಗೊಂಡು ಕುಮಾರ ಕಾರ್ತಿಕೇಯನನ್ನು ರಕ್ಷಿಸಲು ಆದಿಶಕ್ತಿಯ ರೂಪದಲ್ಲಿ ಕಾಣಿಸಿಕೊಂಡಾಗ, ಇಂದ್ರನು ಭಯದಿಂದ ನಡುಗಲು ಪ್ರಾರಂಭಿಸಿದನು. ನಂತರ ಇಂದ್ರನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ದೇವಿಯ ಬಳಿ ಕ್ಷಮೆಯನ್ನು ಕೇಳಿದನು. ಈ ಪರಾಕ್ರಮದಿಂದಾಗಿ, ಎಲ್ಲಾ ದೇವತೆಗಳು ದುರ್ಗಾ ದೇವಿಯ ಈ ರೂಪವನ್ನು ಸ್ಕಂದಮಾತೆ ಎಂದು ಕರೆದು ಆಕೆಯನ್ನು ಸ್ತುತಿಸಲು ಪ್ರಾರಂಭಿಸಿದರು. ಆಕೆ ಪದ್ಮಾಸನಾ ದೇವಿ ಎಂದೂ ಪ್ರಸಿದ್ಧಳಾಗಿದ್ದಾಳೆ ಎಂದು ಅವರು ಹೇಳಿದರು.
ನವರಾತ್ರಿಯ 5ನೇ ದಿನದಂದು ಸ್ಕಂದಮಾತೆಯ ಆರಾಧನೆ ಮಾಡುವ ಭಕ್ತರು ಆಕೆಯ ಕೃಪಾದೃಷ್ಟಿಯಿಂದ ಶಾಂತಿ, ಸಮಾಧಾನ, ಆಂತರಿಕ ಶಕ್ತಿ ಮತ್ತು ತೇಜಸ್ಸನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ವಿಶೇಷವಾಗಿ, ಸಂತಾನ ಬಯಸುವ ದಂಪತಿಗಳು ಈ ದಿನದ ಪೂಜೆಯಿಂದ ಅಪಾರ ಅನುಗ್ರಹವನ್ನು ಪಡೆಯುತ್ತಾರೆ ಎಂಬ ನಂಬಿಕೆ ಜನಮಾನಸದಲ್ಲಿ ಬೇರೂರಿದೆ ಎಂದರು.
ಮಹಾನ್ ವೀರನಾದ ಸ್ಕಂದನಿಗೆ ತಾಯಿಯಾದ್ದರಿಂದ ದುರ್ಗಾ ದೇವಿಯ ಈ ರೂಪಕ್ಕೆ ಸ್ಕಂದಮಾತಾ ಎಂದು ಹೆಸರು ಬಂದಿದೆ. ಈ ರೂಪವು ಮಾತೃತ್ವದ ಪ್ರೀತಿ, ಶಕ್ತಿ ಮತ್ತು ದುಷ್ಟ ಶಕ್ತಿಗಳ ನಾಶದ ಸಂಕೇತವಾಗಿದೆ. ಪಾರಿಜಾತ ಹೂವುಗಳಿಂದ ದೇವಿಯನ್ನು ಪೂಜಿಸುವುದು ಅತ್ಯಂತ ಶುಭಕರವಾಗಿದ್ದು, ಸ್ಕಂದಮಾತೆಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಭಕ್ತರ ಬಡತನ ನಿವಾರಣೆಯಾಗುತ್ತದೆ ಮತ್ತು ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ ಎಂದು ಅವರು ಹೇಳಿದರು.
ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಿಸಿದರು. ಪಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುರಗಿ, ಶರಣಕುಮಾರ ಗುತ್ತರಗಿ, ಎಸ್.ಬಿ. ಭಜಂತ್ರಿ ಸಂಗೀತ ಸೇವೆ ನೀಡಿದರು. ಶ್ರೀಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶ್ರೀ ಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಪಿ. ಸಂಶಿಮಠ, ಅಧ್ಯಕ್ಷ ಸದಾಶಿವಯ್ಯ ಮದರಿಮಠ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಗುಡಿಮನಿ, ಮಹಿಳಾ ಸಮಿತಿ ಅಧ್ಯಕ್ಷರಾದ ಸುವರ್ಣಾ ಮದರಿಮಠ, ಪೂಜಾ ಸಮಿತಿ ಅಧ್ಯಕ್ಷರಾದ ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಗೀತಾ ಎಂ.ಹೂಗಾರ, ಸಹಕಾರ್ಯದರ್ಶಿ ಸುಷ್ಮಾ ಖಂಡಪ್ಪಗೌಡ್ರ, ಕೋಶಾಧ್ಯಕ್ಷರಾದ ಅಶ್ವಿನಿ ನೀಲಗುಂದ, ವಿ.ಎಚ್. ದೇಸಾಯಿಗೌಡ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ನವರಾತ್ರಿಯ ಸಂದರ್ಭದಲ್ಲಿ ಆರಾಧಿಸಲ್ಪಡುವ ಸ್ಕಂದಮಾತೆಯು ತಾಯಿ ಪಾರ್ವತಿಯ ಮತ್ತೊಂದು ಭವ್ಯ ರೂಪ. ಈಕೆ ದೇವತೆಗಳ ಸೇನಾಧಿಪತಿಯಾದ ಸುಬ್ರಹ್ಮಣ್ಯನ (ಕುಮಾರ ಕಾರ್ತಿಕೇಯ) ತಾಯಿ ಎಂದು ಪ್ರಸಿದ್ಧಳು. ಈ ದೇವಿಯನ್ನು ಆರೋಗ್ಯ ಮತ್ತು ಸಂಪತ್ತಿನ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಪುರಾಣಗಳಲ್ಲಿ, ಆಕೆಯನ್ನು ದೇವತೆಗಳ ಸೈನ್ಯದ ನಾಯಕಿ ಎಂದು ಉಲ್ಲೇಖಿಸಲಾಗಿದೆ ಎಂದು ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಹೇಳಿದರು.