ವಿಜಯಸಾಕ್ಷಿ ಸುದ್ದಿ, ಗದಗ: ತಂದೆ-ತಾಯಿಗಳು ಹಾಕಿಕೊಟ್ಟ ಸಂಸ್ಕಾರ, ಗುರು ಕಲಿಸಿದ ಅಕ್ಷರ ಜ್ಞಾನದ ಹಾದಿಯಲ್ಲಿ ನಡೆದಿರುವ ವ್ಯಕ್ತಿ ಯಾರೇ ಆಗಿದ್ದರೂ ಅವರು ಉನ್ನತ ಮಟ್ಟದಲ್ಲಿ ಬಾಳಲು ಸಾಧ್ಯ. ಇಂತಹ ಕಾರ್ಯಗಳು ಆಗುತ್ತಲೇ ಇರಬೇಕು ಎಂದು ಶ್ರೀ ಮ.ನಿ.ಪ್ರ. ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು ನುಡಿದರು.
ಕಪ್ಪತಗಿರಿ ಫೌಂಡೇಶನ್, ಕಪ್ಪತಗಿರಿ ಸಾಹಿತ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಇತ್ತೀಚೆಗೆ ಜರುಗಿದ ಶಿಕ್ಷಕರ ಸಮ್ಮೇಳನ, ರಾಜ್ಯ ಮಟ್ಟದ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪಂಚಯ್ಯ ಹಿರೇಮಠ ಮಾತನಾಡಿ, ಶಿಕ್ಷಕರಾದವರು ನಾವು ನಮ್ಮನ್ನು ಅವಲೋಕಿಸಿಕೊಳ್ಳಬೇಕು. ನಾವು ಮಾಡುವ ಕಾರ್ಯ ಮಕ್ಕಳಿಗಾಗಿ ಪೂರಕವಾಗಿರಬೇಕು. ಫಲಾಪೇಕ್ಷೆ ಬಯಸದೆ ಕರ್ತವ್ಯ ಮಾಡಿದಾಗ ತಕ್ಕ ಪ್ರತಿಫಲ ದೊರೆಯುತ್ತದೆ ಎಂದರು.
ಶರದ್ ರಾವ್ ಹುಯಿಲಗೋಳ ಮಾತನಾಡಿ, ಆಗಿನ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅಕ್ಷರದ ಅವ್ವ ಆದರೆ, ನಮ್ಮೂರಿನ ಹೆಮ್ಮೆ ಚಂದ್ರಕಲಾ ಇಟಗಿಮಠ ಅವರು ಆಧುನಿಕ ಸಾವಿತ್ರಿಬಾಯಿ ಎಂದು ಅಭಿಪ್ರಾಯಪಟ್ಟರು.
ಕೊಟ್ರೇಶ ಜವಳಿ ರಚಿಸಿದ `ರೈತನ ಬೆವರ ಹನಿಗಳು’ ಕೃತಿಯನ್ನು ರವೀಂದ್ರನಾಥ ದೊಡ್ಡಮೇಟಿ ಲೋಕಾರ್ಪಣೆಗೊಳಿಸಿದರು. ಮಹೇಶ್ ಎಸ್.ಹೆಚ್. ಪುಸ್ತಕ ಪರಿಚಯಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವೆನಮನಿ, ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಸಿ.ಬಿ. ಪಲ್ಲೇದ, ಮಲ್ಲಿಕಾರ್ಜುನ ಖಂಡಮ್ಮನವರ, ಗವಿಸಿದ್ದಯ್ಯ ಹಳ್ಳಿಕೇರಿಮಠ, ರತ್ನಾ ಬದಿ, ಬಸಮ್ಮ ಕೋಟಿ, ಡಾ. ಸಾಮುದ್ರಿ, ಡಾ. ವಿಜಯಲಕ್ಷ್ಮಿ ಗೇಟಿಯವರ, ಡಾ. ಪ್ರವೀಣ ಕರಿಯಪ್ಪನವರ, ರಘುನಂದನ ಕೊಪ್ಪರ, ಎಂ.ಎಸ್. ಕಡಿವಾಲ ಮತ್ತಿತರರು ಉಪಸ್ಥಿತರಿದ್ದರು.
ನಂತರ ನಡೆದ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಚಂದ್ರಪ್ಪ ಸೊಬಟಿ ವಹಿಸಿದ್ದರು. ಡಾ. ಲಿಂಗರಾಜ ನಡವಣಿ, ಡಾ. ರಜಿಯಾಬೇಗಂ ನದಾಫ್ ಪಾಲ್ಗೊಂಡಿದ್ದರು. ಡಾ. ವಿಜಯಲಕ್ಷ್ಮಿ ಗೇಟಿಯವರ, ಡಾ. ಪ್ರವೀಣ ಕರೆಪ್ಪನವರ ಗೋಷ್ಠಿಗಳನ್ನು ನಡೆಸಿಕೊಟ್ಟರು.
ನೀಲಮ್ಮ ಅಂಗಡಿ ಪ್ರಾರ್ಥಿಸಿದರು. ಶಿಲ್ಪಾ ಮ್ಯಾಗೇರಿ ಸ್ವಾಗತಿಸಿದರು. ತೋಟಯ್ಯ ಗುಡ್ಡಿಮಠ ಮಾತನಾಡಿದರು. ಎರಡನೇ ದಿನದ ವಿಚಾರ ಸಂಕಿರಣವನ್ನು ರಮೇಶ ಲಮಾಣಿ ಉದ್ಘಾಟಿಸಿದರು. ಡಾ. ಬಿ.ಎಲ್. ಚವ್ಹಾಣ ಅಧ್ಯಕ್ಷತೆ ವಹಿಸಿದರು. ಡಾ. ನಿಂಗು ಸೊಲಗಿ ಅಧ್ಯಕ್ಷತೆಯಲ್ಲಿ 2ನೇ ಗೋಷ್ಠಿ ಜರುಗಿತು. ಡಾ. ರಜಿಯಾಬೇಗಂ, ಪ್ರಿಯಾಂಕಾ ನಡುವೆನಮನಿ, ಪ್ರಿಯಾ ಹುಯಿಲಗೋಳ ಪ್ರಬಂಧ ಮಂಡಿಸಿದರು.
ಚಂದ್ರಕಲಾ ಇಟಗಿಮಠ ಮಾತನಾಡಿ, ಒಬ್ಬ ಸಾಧಕರಿಗೆ ಹಲವಾರು ವಿಘ್ನಗಳು ಬರುತ್ತವೆ. ಸಂಘಟನೆ ಎಂದರೆ ಮುಳ್ಳಿನ ಮೇಲೆ ನಡೆದಂತೆ. ಆದರೂ ಒಳ್ಳೆಯ ಸಮಾಜಮುಖಿ ಕಾರ್ಯಗಳನ್ನು ಮಾಡುವವರಿಗೆ ಸ್ವತಃ ದೇವರೇ ಸಹಾಯ ಹಸ್ತ ನೀಡುತ್ತಾನೆ ಎಂದರು.



