ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಅಂದರೆ ನಿಸರ್ಗ ಮಾತೆಯ ತವರು. ವರ್ಷಪೂರ್ತಿ ಹಚ್ಚಹಸಿರಿನಿಂದ ಕಂಗೊಳಿಸುವ ತುಂಬುಮುತ್ತೈದೆ. ಜಗನ್ಮಾತೆ ಅನ್ನಪೂರ್ಣೇಶ್ವರಿ, ಶಾರದಾಂಬೆಯ ನೆಲೆಬೀಡು. ಕಾಫಿನಾಡು ಕೇವಲ ಜಿಲ್ಲೆಯಲ್ಲ. ಧಾರ್ಮಿಕತೆ ಜೊತೆ ಪ್ರವಾಸಿಗರಿಗೆ ಕೇಳಿದ್ದೆಲ್ಲವನ್ನೂ ನೀಡುವ ಅಕ್ಷಯಪಾತ್ರೆ. ಪ್ರವಾಸಿಗರಿಗಂತೂ ನಿಂತಲ್ಲೆ ಮೈಮರೆಸುವ ಹಾಟ್ ಸ್ಪಾಟ್. ಪ್ರತಿ ವರ್ಷ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ.
ಅದರಂತೆ ಆಯುಧ ಪೂಜೆಯ, ದಸರಾ ಸೇರಿ ಸಾಲು ಸಾಲು ರಜೆ ಹಿನ್ನೆಲೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಇದರಿಂದ ಮುಳ್ಳಯ್ಯನಗಿರಿ ಮಾರ್ಗದಲ್ಲಿ 4-5 ಕಿ.ಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ.
ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ ಭಾಗಕ್ಕೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಆಯುಧಪೂಜೆ, ವಿಜಯದಶಮಿ ಹಿನ್ನೆಲೆ ಸಾಲು ಸಾಲು ರಜೆಗಳಿದ್ದು, ಪ್ರವಾಸಿಗರು ಈ ಭಾಗದ ಪ್ರವಾಸಿ ತಾಣಗಳಿಗೆ ಬಂದಿದ್ದಾರೆ. ಗಿರಿ ಭಾಗಕ್ಕೆ ನಿತ್ಯ 1200 ವಾಹನಗಳಿಗೆ ಮಾತ್ರ ಅವಕಾಶವಿದೆ. ಬೆಳಗ್ಗೆ 600, ಮಧ್ಯಾಹ್ನ 600 ವಾಹನಗಳಿಗಷ್ಟೆ ಅವಕಾಶ ನೀಡಲಾಗುತ್ತದೆ.
ಈಗಾಗಲೇ ಗಿರಿ ಭಾಗಕ್ಕೆ ಸಾಕಷ್ಟು ವಾಹನಗಳು ತೆರಳಿದ್ದು, ಎನ್.ಎಂ.ಡಿ.ಸಿ.ಯಿಂದ ಕೈಮರ ಚೆಕ್ ಪೋಸ್ಟ್‌ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ. ಮೇಲೆ ಹೋಗಿರುವ ವಾಹನಗಳು ಕೆಳಗಿಳಿದ ಮೇಲೆ ಬೇರೆ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ.