ಭಾವೈಕ್ಯತೆ ಮೂಡಿಸಿದ ದಸರಾ ದರ್ಬಾರ್

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಲಕ್ಕುಂಡಿ ಗ್ರಾಮದೇವತೆ ಮರಗಮ್ಮ ದೇವಿಯ ವಿಜಯದಶಮಿ ದಸರಾ ದರ್ಬಾರ್ ಕಾರ್ಯಕ್ರಮವು ಗ್ರಾಮದಲ್ಲಿ ಸಾಂಪ್ರದಾಯಕವಾಗಿ, ಭಾವೈಕ್ಯತೆಯಿಂದ ಜರುಗಿತು.

Advertisement

ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ದ್ಯಾಮವ್ವ ದೇವಿಗೆ ಸಂಜೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಮರಗಮ್ಮ ದೇವಿಯ ಮೂರ್ತಿಯನ್ನು ದೇವಸ್ಥಾನದ ಸುತ್ತ ಐದು ಸುತ್ತು ಪ್ರದಕ್ಷಿಣೆ ಹಾಕಿ ನಂತರ ದೇವಿಯ ದರ್ಬಾರ್ ಕಾರ್ಯಕ್ರಮಕ್ಕೆ ವಿರೂಪಾಕ್ಷಗೌಡ ಪಾಟೀಲ ಅವರ ಮನೆಯಲ್ಲಿ ದೇವಿಗೆ ಉಡಿ ತುಂಬುವುದರ ಮೂಲಕ ಚಾಲನೆ ದೊರೆಯಿತು. ಕಳೆದ 46 ವರ್ಷಗಳಿಂದ ನಡೆದು ಬಂದಿರುವ ವಿಜಯದಶಮಿಯ ಸಂಪ್ರದಾಯದಂತೆ ಗ್ರಾಮದ ಗೌಡ್ರ, ಕುಲಕರ್ಣಿ, ಶ್ಯಾನಭೋಗರ, ಪತ್ತಾರ ಮನೆತನಗಳಲ್ಲಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆದು ಬಂದಿದೆ. ಅದರಂತೆ ಹಿಂದೆ 15 ಮನೆಗಳಲ್ಲಿ ಮಾತ್ರ ಉಡಿ ತುಂಬುವ ಕಾರ್ಯ ನೆರವೇರುತ್ತಿತ್ತು. ಕಳೆದ 8 ವರ್ಷಗಳಿಂದ 27 ಮನೆಗಳಲ್ಲಿ ಉಡಿ ತುಂಬುವ ಕಾರ್ಯಕ್ರಮವು ನಡೆದು ಬಂದಿದ್ದು, ಮುಸ್ಲಿಂ ಕುಟುಂಬವೂ ಸಹ ದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದಿದ್ದಾರೆ ಎಂದು ಗ್ರಾಮದೇವತೆ ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ ಅರಹುಣಸಿ, ಸದಸ್ಯ ಅಶೋಕ ಬೂದಿಹಾಳ ತಿಳಿಸಿದರು.

ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿಯ ಬನ್ನಿ ಮಹಾಂಕಾಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಭಕ್ತರು ಪರಸ್ಪರ ಬನ್ನಿ ಕೊಡುವುದರ ಮೂಲಕ ಪ್ರೀತಿ ಸೌಹಾರ್ದತೆ ಮೆರೆದರು.

ಪುರಾಣ ಮಂಗಲೋತ್ಸವದ ಅಂಗವಾಗಿ ಗ್ರಾಮದೇವತೆ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ದ್ಯಾಮವ್ವ ದೇವಿಯ ಮೂರ್ತಿಯ ಮೆರವಣಿಗೆಯೊಂದಿಗೆ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು.

ಗ್ರಾಮದೇವತೆಯಾದ ಮರಗಮ್ಮ ದೇವಿಯ ದಸರಾ ದರ್ಬಾರ್‌ನಲ್ಲಿ ಹಿರೇಮಸೂತಿಯ ಬಾಗಿಲಲ್ಲಿ ಮುಸಲ್ಮಾನ ಭಾಂದವರು ಉಡಿ ತುಂಬಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಕೊನೆಯ ಉಡಿ ತುಂಬುವ ಕಾರ್ಯವು ಗ್ರಾಮದಲ್ಲಿ ಪ್ರಸಿದ್ಧಿ ಪಡೆದಿರುವ ಕಾಮಣಿ ಬಳ್ಳಿ ಹಾಕುವ ನಾಟಿ ವೈದ್ಯ ಹುಸೇನಸಾಬ ಗುಡಗೇರಿ ಮನೆಯಲ್ಲಿ ಶ್ರದ್ಧಾ–ಭಕ್ತಿಯಿಂದ ನಡೆಯಿತು. ಕಳೆದ 8 ವರ್ಷಗಳಿಂದ ದೇವಿಯ ಉಡಿ ತುಂಬುವ ಕಾರ್ಯದಿಂದ ನಮಗೆ ಒಳ್ಳೆಯದಾಗಿದೆ ಎಂದು ಹುಸೇನಸಾಬ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಬಾರಕೋಲ ಕುಣಿತ

ಬಜಾರ ರಸ್ತೆಯಲ್ಲಿರುವ ಮೈಲಾರ ದೇವರ ದೇವಸ್ಥಾನದ ವಿಜಯದಶಮಿಯ ಮೆರವಣಿಗೆಯ ಸಂದರ್ಭದಲ್ಲಿ ಮೈಲಾರ ದೇವರ ಭಕ್ತರು ಬಾರಕೋಲಿನಿಂದ ಹೊಡೆದುಕೊಳ್ಳುವ ದೃಶ್ಯ ರೋಮಾಂಚಕವಾಗಿತ್ತು. ಹತ್ತಾರು ಭಕ್ತರು ಜೋರಾಗಿ ಬಾರಕೋಲಿನಿಂದ ಕಾಲಿಗೆ ಹೊಡೆದುಕೊಳ್ಳುತ್ತಾ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇದರೊಂದಿಗೆ ಪಾಲಕಿ ಉತ್ಸವ ಜರುಗಿತು.

“ವಿಜಯದಶಮಿ ಅಂಗವಾಗಿ ಕಳೆದ 46 ವರ್ಷಗಳಿಂದ ಗ್ರಾಮದೇವತೆಯ ದಸರಾ ದರ್ಬಾರ್ ನಡೆಯುತ್ತಾ ಬಂದಿದ್ದು, ಗ್ರಾಮದ ಸರ್ವ ಸಮುದಾಯದವರು ಪಾಲ್ಗೊಳ್ಳುತ್ತಿರುವುದರಿಂದ ಇದೊಂದು ಭಾವೈಕ್ಯತೆಯ ದಸರೆಯಾಗಿದೆ”
– ರಾಜು ಪಾಟೀಲ,
ಸೇವಾ ಸಮಿತಿ ಸದಸ್ಯರು.


Spread the love

LEAVE A REPLY

Please enter your comment!
Please enter your name here