ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ಸ್ವಾವಲಂಬಿಯಾಗಿ ಸರ್ವತೋಮುಖ ಅಭಿವೃದ್ಧಿಯಾಗಬೇಕೆಂಬ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಅವರು ನುಡಿದಂತೆ ನಡೆದು, ನಡೆದಂತೆ ನುಡಿದು ತಮ್ಮ ಬದುಕನ್ನು ಮಾನವಕುಲದ ಶ್ರೇಯಸ್ಸಿಗೆ ಮುಡಿಪಾಗಿಟ್ಟಿದ್ದ ಮಹಾಸಂತರಾಗಿದ್ದು, ಅವರ ಸತ್ಯ, ಅಹಿಂಸೆ, ಸತ್ಯಾಗ್ರಹ, ಸರಳತೆ, ಕ್ಷಮೆ ಮುಂತಾದ ಸಂದೇಶಗಳು ಸಾರ್ವಕಾಲಿಕ ಜೀವನ ಮೌಲ್ಯಗಳಾಗಿವೆ ಎಂದು ಪ್ರೊ. ಸುಧಾ ಕೌಜಗೇರಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅವರ ಸರಳ, ಸಜ್ಜನ ಬದುಕೇ ಅವರ ಸಂದೇಶವಾಗಿದ್ದು, ಅವರ ಜೀವನ ಮೌಲ್ಯಗಳನ್ನು ಅರ್ಥೈಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಇತಿಹಾಸ ಪ್ರಾಧ್ಯಾಪಕ ಮತ್ತು ಎನ್.ಎಸ್.ಎಸ್ ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ ಮಾತನಾಡಿ, ಗಾಂಧೀಜಿಯವರ ‘ಸಶಸ್ತ್ರ ಶಕ್ತಿಗಿಂತ ನಿರಾಯುಧ ಅಹಿಂಸೆಯ ಶಕ್ತಿ ಶ್ರೇಷ್ಠವಾದುದು ಮತ್ತು ಕ್ರೌರ್ಯವನ್ನು ಕ್ರೌರ್ಯದಿಂದ ಎದುರಿಸುವುದು ನೈತಿಕ ಅವನತಿಗೆ ಕಾರಣವಾಗುತ್ತದೆ’ ಎಂಬ ಸಂದೇಶಗಳನ್ನು ಮಾನವಕುಲ ಅರ್ಥೈಸಿಕೊಂಡರೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಾಮರಸ್ಯ, ಭಾವೈಕ್ಯತೆ ಸಾಧ್ಯವೆಂದು ಹೇಳಿದರು.
ಪ್ರೊ. ಲಕ್ಷ್ಮಣ ಮುಳಗುಂದ, ಡಾ. ಎಂ.ವೈ. ಜಟ್ಟೆಣ್ಣವರ, ಪ್ರಶಾಂತ ಹುಲಕುಂದ ಗಾಂಧೀಜಿ ಅವರ ಜೀವನ ಮೌಲ್ಯಗಳ ಕುರಿತು ಮಾತನಾಡಿದರು. ರಮೇಶ ಹುಲಕುಂದ ಕಾರ್ಯಕ್ರಮ ನಡೆಸಿಕೊಟ್ಟರು. ಬಸವರಾಜ ಬಳಗಾನೂರಮಠ ವಂದಿಸಿದರು.



