ಮುಂಬೈ: ಇದೇ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಗಾಗಿ ಬಿಸಿಸಿಐ ಟೀಂ ಇಂಡಿಯಾದ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಟಿ20 ಸರಣಿಗೆ ನಿರೀಕ್ಷೆಯಂತೆ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಲಿದ್ದಾರೆ. ಆದರೆ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡದಲ್ಲಿದ್ದರೂ, ಏಕದಿನ ಕ್ರಿಕೆಟ್‌ಗೆ ನೂತನ ನಾಯಕನಾಗಿ ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದಲೇ ರೋಹಿತ್ ಹಾಗೂ ಕೊಹ್ಲಿ ಅವರ ಏಕದಿನ ನಿವೃತ್ತಿಯ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.
ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಮತ್ತು ಕೊಹ್ಲಿ, ಏಕದಿನ ಕ್ರಿಕೆಟ್ ವೃತ್ತಿಜೀವನಕ್ಕೂ ತೆರೆ ಎಳೆಯುವ ಹಂತದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ, 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಇವರಿಬ್ಬರ ಸ್ಥಾನ ಖಚಿತವಿಲ್ಲ. ವಯಸ್ಸಿನ ಅಂಶ ಹಾಗೂ ಈಗಾಗಲೇ ತೆಗೆದುಕೊಂಡಿರುವ ನಿವೃತ್ತಿ ನಿರ್ಧಾರಗಳಿಂದಾಗಿ ಮುಂದಿನ ವರ್ಷಗಳಲ್ಲಿ ಇವರ ಅವಕಾಶಗಳು ಸೀಮಿತವಾಗುವ ಸಾಧ್ಯತೆ ಇದೆ.
ಇದೀಗ ನಡೆಯಲಿರುವ ಆಸ್ಟ್ರೇಲಿಯಾ ಸರಣಿ ಅತ್ಯಂತ ನಿರ್ಣಾಯಕವಾಗಿದ್ದು, ರೋಹಿತ್ ಮತ್ತು ಕೊಹ್ಲಿ 2027ರ ವಿಶ್ವಕಪ್ ರೇಸ್‌ನಲ್ಲಿ ಉಳಿಯಬೇಕಾದರೆ, ಈ ವರ್ಷ ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ದೇಸಿ ಕ್ರಿಕೆಟ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಬೇಕಾಗುತ್ತದೆ. ಇಲ್ಲದಿದ್ದರೆ, ಬಹುತೇಕ ಏಕದಿನ ಕ್ರಿಕೆಟ್‌ನಿಂದಲೂ ಔಟ್ ಆಗುವ ಸಂಭವವಿದೆ.
ಏಷ್ಯಾಕಪ್ ಟೂರ್ನಿಯಿಂದ ಕಡೆಗಣಿಸಲ್ಪಟ್ಟಿದ್ದ ಶ್ರೇಯಸ್ ಅಯ್ಯರ್‌ಗೆ ಮುಂಬರುವ ಟೂರ್ನಿಗಳನ್ನ ಗಮನದಲ್ಲಿಟ್ಟಿಕೊಂಡು ಉಪನಾಯಕನ ಸ್ಥಾನ ನೀಡಲಾಗಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಳಿಕ ಏಕದಿನ ಕ್ರಿಕೆಟ್‌ಗೆ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಕಂಬ್ಯಾಕ್ ಮಾಡಿದ್ದಾರೆ.
ಇದರೊಂದಿಗೆ ಇದೇ ಮೊದಲಬಾರಿಗೆ ಏಕದಿನ ಕ್ರಿಕೆಟ್‌ಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಪದಾರ್ಪಣೆ ಮಾಡಲಿದ್ದಾರೆ. ಆದ್ರೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರನ್ನು ಏಕದಿನ ತಂಡದಿಂದ ಕೈಬಿಟ್ಟು, ಟಿ20 ತಂಡಕ್ಕೆ ಮಾತ್ರ ಆಯ್ಕೆ ಮಾಡಿರೋದು ಅಚ್ಚರಿ ಮೂಡಿಸಿದೆ. ಅಲ್ಲದೇ ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ ಹೊಸ ಮುಖಗಳಿಗೆ ಬಿಸಿಸಿಐ ಮಣೆ ಹಾಕಿದೆ.
ಭಾರತ ಏಕದಿನ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್.
ಭಾರತ ಟಿ20 ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್‌ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್.