ವಿಜಯಸಾಕ್ಷಿ ಸುದ್ದಿ, ಲಕ್ಷೇಮೇಶ್ವರ: ತಾಲೂಕಿನ ಹೂವಿನ ಶಿಗ್ಲಿ ಮಠದ ಗುರುಕುಲದಲ್ಲಿನ ನೂರಾರು ಮಕ್ಕಳ ತ್ರಿವಿಧ ದಾಸೋಹ ಸೇವೆಗೆ ಕೊರಡೂರಿನ ಗಿರಿಜಮ್ಮ ಶಿವಾನಂದ ಬಾಳೇಹೊಸೂರ ದಂಪತಿಗಳು 1,11,111 ರೂ ಧನ ಸಹಾಯ ಮಾಡಿದ್ದಲ್ಲದೇ ಗುರುಕುಲದ 10 ಅನಾಥ ಮಕ್ಕಳನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಶ್ರೀ ಮಠದ ಚನ್ನವೀರ ಮಹಾಸ್ವಾಮಿಗಳು ಈ ದಂಪತಿಗಳಿಗೆ ಗೌರವ ಪುರಸ್ಕಾರ ಮಾಡಿ ಆಶೀರ್ವಚನ ನೀಡಿ, ಪ್ರಸ್ತುತ ದಿನಮಾನಗಳಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದ ಸೌಲಭ್ಯವಿಲ್ಲದ ಮಠದ ಗುರುಕುಲದಲ್ಲಿನ 300ಕ್ಕೂ ಹೆಚ್ಚು ಮಕ್ಕಳಿಗೆ ನಿತ್ಯ ತ್ರಿವಿಧ ದಾಸೋಹ ಸೇವೆ ಅತ್ಯಂತ ಕಷ್ಟವಾಗಿದೆ. ಹರ ಮುನಿದರೂ ಗುರುಕಾಯುವರು ಎಂಬಂತೆ ಲಿಂ. ನಿರಂಜನ ಜಗದ್ಗುರುಗಳ ಆಶೀರ್ವಾದ, ಗ್ರಾಮಸ್ಥರ, ಭಕ್ತರ ಸಹಾಯ-ಸಹಕಾರದಿಂದ ಮಕ್ಕಳ ಸೇವೆ ಮಾಡಲು ಸಾಧ್ಯವಾಗುತ್ತಿದೆ. ಕೊರಡೂರಿನ ಗಿರಿಜಮ್ಮ ಶಿವಾನಂದ ಬಾಳೇಹೊಸೂರ ದಂಪತಿಗಳ ಸಹಾಯ-ಸಹಕಾರದಿಂದ ನೂರಾರು ಅನಾಥ, ಬಡ ಮಕ್ಕಳು ಸಂತೃಪ್ತರಾಗಿದ್ದು, ಗುರುಕುಲದ ತ್ರಿವಿಧ ದಾಸೋಹದ ಶ್ರೇಷ್ಠ ಪರಂಪರೆ ಮುಂದುವರೆಯಲು ಅನುಕೂಲವಾಗಿದೆ. ಮಠ-ಮಾನ್ಯಗಳ ತ್ರಿವಿಧ ದಾಸೋಹ ಸೇವೆಗೆ ಭಕ್ತರೇ ಆಧಾರ ಸ್ತಂಭವಾಗಿದ್ದಾರೆ. ಭಕ್ತರ ಸೇವೆಗೆ ಶ್ರೀಮಠದ ಆಶೀರ್ವಾದ ಮತ್ತು ಮಕ್ಕಳ ಶುಭ ಹಾರೈಕೆಯಿದ್ದು, ಭಗವಂತ ಅವರಿಗೆ ಇನ್ನಷ್ಟು ಸಂಪತ್ತು, ಶಕ್ತಿ ನೀಡಲಿ ಎಂದು ಹಾರೈಸಿದರು.
ಶ್ರೀಮಠದ ಗೌರವ ಸ್ವೀಕರಿಸಿದ ದಂಪತಿಗಳು ಮತ್ತು ಪುತ್ರರಾದ ಅರಣ್ಯಾಧಿಕಾರಿ ರಾಜು ಬಾಳೇಹೊಸೂರ ಮಾತನಾಡಿ, ಮಕ್ಕಳ ಸೇವೆ ದೇವರ ಸೇವೆಯಾಗಿದ್ದು, ಶ್ರೀಮಠವು ಬಡವರು, ನಿರ್ಗತಿಕರು ಮತ್ತು ಅನಾಥ ಮಕ್ಕಳಿಗಾಗಿ ಮಾಡುತ್ತಿರುವ ಸೇವೆಗೆ ತಮ್ಮದೊಂದು ಅಳಿಲು ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸಂತೃಪ್ತಿ ತಂದಿದೆ. ಈ ಸೇವೆಯನ್ನು ಇನ್ನಷ್ಟು ಹೆಚ್ಚಿಸುವ ಶಕ್ತಿ ದೇವರು ನೀಡಲೆಂದು ಧನ್ಯತಾಭಾವದಿಂದ ಪ್ರಾರ್ಥಿಸುತ್ತೇವೆ ಎಂದರು.