ರಾಮನಗರ:- ಲೋಕಾಯುಕ್ತರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮುರುಗಪ್ಪ ನಿಂಗಪ್ಪ ಕುಂಬಾರ ಬಂಧಿತ ಆರೋಪಿ. ಬೆಂಗಳೂರು ದಕ್ಷಿಣದ ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ಹೆಸರಿನಲ್ಲಿ ಅಧಿಕಾರಿಗಳಿಗೆ ಕರೆಮಾಡಿದ್ದ ಆರೋಪಿಯನ್ನು ರಾಮನಗರದ ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ಅಧಿಕಾರಿಗಳಿಗೆ ಕರೆ ಮಾಡಿ ಹಣದ ಬೇಡಿಕೆಯಿಡುತ್ತಿದ್ದ ಮುರುಗಪ್ಪ ನಿಂಗಪ್ಪ ಕುಂಬಾರ ಇತ್ತೀಚಿಗೆ ಮಾಗಡಿಯ ಸಿಡಿಪಿಓ ಸುರೇಂದ್ರ, ಜಿಲ್ಲಾ ಸರ್ಜನ್ ಮಂಜುನಾಥ್ಗೆ ಕರೆ ಮಾಡಿ ಅವರ ಬಳಿಯೂ ತಾನು ಲೋಕಾಯುಕ್ತ ಅಧಿಕಾರಿಯೆಂದು ಹೇಳಿಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದ. ಈಗ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಜೈಸಿಂಗ್‌ಪುರದಲ್ಲಿ ರಾಮನಗರದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯು ಈ ಹಿಂದೆ 17 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ. ಅಷ್ಟೇ ಅಲ್ಲದೇ ಲೋಕಾಯುಕ್ತದಲ್ಲಿಯೂ ಪೇದೆಯಾಗಿ ಕೆಲಸ ಮಾಡಿದ್ದ. ಆ ಸಮಯದಲ್ಲಿ ಆರೋಪಿಗಳಿಗೆ ನೀಡುವ ವಾರಂಟ್ಗಳನ್ನು ಹಣಕ್ಕಾಗಿ ದುರ್ಬಳಕೆ ಮಾಡಿಕೊಂಡ ಕಾರಣ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಸೇವೆಯಿಂದ ವಜಾಗೊಂಡ ಬಳಿಕ ಇತರ ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪಡೆದು ಅವರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.


