ಹಾಸನ:- ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದ ಆಟಿಕೆ ರೈಲನ್ನು ತರಲು ನೀರಿಗೆ ಇಳಿದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಜರುಗಿದೆ.
ಪ್ರಣಯ್ (7) ಹಾಗೂ ಪ್ರಶಾಂತ್ ಮೃತರು. ಪ್ರಣಯ್ ಎರಡನೇ ತರಗತಿ ಓದುತ್ತಿದ್ದು, ನಿಶಾಂತ್ ಅಂಗನವಾಡಿಗೆ ಹೋಗುತ್ತಿದ್ದ. ಈ ಇಬ್ಬರೂ ಶಾಲೆಗೆ ರಜೆ ಇದ್ದ ಕಾರಣ ಕೂಲಿಗೆ ಹೋಗಿದ್ದ ಪೋಷಕರ ಜೊತೆ ಕಾಫಿ ತೋಟಕ್ಕೆ ಹೋಗಿದ್ದರು.
ಕಾಫಿ ತೋಟದ ಕೃಷಿ ಹೊಂಡದ ಬಳಿ ಆಟ ಆಡುತ್ತಾ, ಆಟಿಕೆ ರೈಲು ನೀರಿಗೆ ಬಿದ್ದಿದೆ. ಅದನ್ನು ಎತ್ತಿಕೊಳ್ಳಲು ಇಬ್ಬರು ನೀರಿಗಿಳಿದಿದ್ದು, ಮುಳುಗಿ ಸಾವನ್ನಪ್ಪಿದ್ದಾರೆ. ಬಹಳ ಸಮಯದವರೆಗೂ ಮಕ್ಕಳು ಕಾಣಿಸದೇ ಇದ್ದಾಗ, ಪೋಷಕರು ಹುಡುಕಾಟ ನಡೆಸಿದ್ದಾರೆ. ಆಗ ಕೃಷಿ ಹೊಂಡದ ಬಳಿ ಚಪ್ಪಲಿಗಳು ಪತ್ತೆಯಾಗಿವೆ. ಕೃಷಿ ಹೊಂಡದಲ್ಲಿ ಹುಡುಕಾಟ ನಡೆಸಿದಾಗ ಮಕ್ಕಳ ಶವ ಪತ್ತೆಯಾಗಿವೆ.
ಶವಗಳನ್ನು ಕೃಷಿ ಹೊಂಡದಿಂದ ಹೊರ ತೆಗೆದು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ರವಾಸಲಾಗಿದೆ. ಆಸ್ಪತ್ರೆ ಬಳಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.