ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಯಶಸ್ವಿಯಾಗಿ 50 ವರ್ಷಗಳನ್ನು ಪೂರೈಸಿದ್ದು, ಮಂಡಳಿಯ ಸುವರ್ಣಮಹೋತ್ಸವ ಕಾರ್ಯಕ್ರಮವನ್ನು ಸಾರ್ವಜನಿಕ ಜಾಗೃತಿ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ನವೆಂಬರ್ 3ರಂದು ಆಚರಿಸಲು ನಿರ್ಧರಿಸಲಾಗಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಪ್ರಭಾರ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಭುವನೇಶ ಪಾಟೀಲ ಹೇಳಿದರು.
ಅವರು ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣಮಹೋತ್ಸವ ಸಮಾರಂಭ ಆಚರಿಸುವ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗ ಯಶಸ್ವಿಯಾಗಿ 50 ವರ್ಷ ಪೂರೈಸಿದ್ದು, ಸುವರ್ಣಮಹೋತ್ಸವ ಕಾರ್ಯಕ್ರಮವನ್ನು ವಿವಿಧ ಸಮುದಾಯಗಳನ್ನು ತೊಡಗಿಸಿಕೊಂಡು, ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ.
ಸುವರ್ಣಮಹೋತ್ಸವ ಕಾರ್ಯಕ್ರಮದ ಮೂಲಕ ಮಂಡಳಿಯ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು, ಪರಿಸರ ಸಂರಕ್ಷಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ನವೆಂಬರ್ 3ರಂದು ಮಧ್ಯಾಹ್ನ 2 ಗಂಟೆಗೆ ಆಯೋಜಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸುವರ್ಣಮಹೋತ್ಸವ ಕಾರ್ಯಕ್ರಮ ಆಯೋಜಿಸಬೇಕು. ಮಾಲಿನ್ಯ ಮಂಡಳಿಯ ಅಧಿಕಾರಿಗಳು ತಾಲೂಕು ಆಡಳಿತದೊಂದಿಗೆ ಸಮನ್ವಯ ಸಾಧಿಸಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ಸಿದ್ಧಪಡಿಸಿಕೊಳ್ಳಬೇಕೆಂದು ಅವರು ಸೂಚಿಸಿದರು.
ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ ಜನಸಾಮಾನ್ಯರನ್ನು ತಲುಪುವಂತೆ ಸ್ಥಳೀಯ ಪರಿಸರ ಮಾಲಿನ್ಯ ಸಮಸ್ಯೆಗಳಾದ ಘನ ತ್ಯಾಜ್ಯ ನಿರ್ವಹಣೆ, ಜಲ ಮಾಲಿನ್ಯ, ಇ-ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ, ವಿವಿಧ ಸ್ಪರ್ಧೆಗಳನ್ನು, ಬೀದಿ ನಾಟಕ, ಮಕ್ಕಳ ಭಾಷಣ ಆಯೋಜಿಸಲು ಕ್ರಮ ವಹಿಸಬೇಕೆಂದು ಅವರು ತಿಳಿಸಿದರು.
ಹಿರಿಯ ಪರಿಸರ ಅಧಿಕಾರಿ ಜಗದೀಶ ಐ.ಎಚ್. ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಕಾಣಕೋಣಕರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಹೋನಕೇರಿ, ಸಹಾಯಕ ಅರಣ್ಯಾಧಿಕಾರಿ ಪರಿಮಳ, ಪಿಯು ಉಪನಿರ್ದೇಶಕಿ ತೇಜಸ್ವಿನಿ ನಾರಾಯಣಕರ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ಡಾ. ರೇಣುಕಾ ಅಮಲಜೇರಿ, ಪರಿಸರ ನಾಗರಿಕ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಎಲ್.ಆರ್. ನಾಯಕ ಸೇರಿದಂತೆ ವಿವಿಧ ತಾಲೂಕುಗಳ ಇಒ ಅವರು, ಇಲಾಖೆಗಳ ಅಧಿಕಾರಿಗಳು, ಸರ್ಕಾರೇತರ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿಗಳು, ಪರಿಸರವಾದಿಗಳು, ವಿದ್ಯಾರ್ಥಿಗಳು, ಜನ ಪ್ರತಿನಿಧಿಗಳು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಂಘಸಂಸ್ಥೆಗಳು ಹಾಗೂ ಇತರೆ ಭಾಗಿದಾರರ ಸಹಭಾಗಿತ್ವದಲ್ಲಿ ಜಿಲ್ಲೆಯಾದ್ಯಂತ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸುವರ್ಣಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಅಧಿಕಾರಿಗಳು ಸಿದ್ಧತೆ ಪೂರ್ಣಗೊಳಿಸಿ, ವರದಿ ಸಲ್ಲಿಸಬೇಕೆಂದು ಭುವನೇಶ ಪಾಟೀಲ ಹೇಳಿದರು.