ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ನೂರಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿರುವ ಕಾಂತರ ಸಿನಿಮಾಗೆ ಪರಭಾಷೆಯ ಮಂದಿಯೂ ಹ್ಯಾಟ್ಸ್ ಆಫ್ ಹೇಳ್ತಿದ್ದಾರೆ. ಆದ್ರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿದ ನಂತರ ಕೆಲವರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅಂಥವರಿಗೆ ತುಳುಕೂಟ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಅಭಿಮಾನಿಗಳಿಗೆ ಬುದ್ಧಿ ಹೇಳಬೇಕು ಎಂದು ರಿಷಬ್ ಶೆಟ್ಟಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
‘ನಾವು ಪತ್ರ ಬರೆದಿರುವುದು ಸಿನಿಮಾದ ಬಗ್ಗೆ ಅಲ್ಲ. ಸಿನಿಮಾ ಮಾಡಲಿ, ಪ್ರಪಂಚಕ್ಕೆ ತೋರಿಸಲಿ. ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮೈಮೇಲೆ ಬರುವುದು, ವೇಷ ಹಾಕಿಕೊಂಡು ಓಡಾಡುವುದು ಸರಿಯಲ್ಲ. ಬರೀ ಕರ್ನಾಟಕದಲ್ಲಿ ಆದರೆ ನಾವು ಕ್ರಮ ತೆಗೆದುಕೊಳ್ಳಬಹುದು. ದಕ್ಷಿಣ ಭಾರತದ ಬೇರೆ ಬೇರೆ ಕಡೆ ಹೀಗೆಯೇ ಆಗುತ್ತಿದೆ. ಅದು ನಮಗೆ ಯೋಚನೆ ಆಗುತ್ತಿದೆ. ನಮ್ಮ ಸಂಸ್ಕೃತಿ ಮೇಲೆ ದಾಳಿ ಆಗುತ್ತಾ ಎಂಬ ಹೆದರಿಕೆಯಿಂದ ನಾನು ರಿಷಬ್ ಶೆಟ್ಟಿಗೆ ಪತ್ರ ಬರೆದಿದ್ದೇನೆ’ ಎಂದಿದ್ದಾರೆ ಸುಂದರ್ ರಾಜ್ ರೈ.
‘ಪತ್ರಕ್ಕೆ ರಿಷಬ್ ಶೆಟ್ಟಿ ಅವರಿಂದ ಇನ್ನೂ ಉತ್ತರ ಬಂದಿಲ್ಲ. ರಿಷಬ್ ಶೆಟ್ಟಿಗೆ ನಾವು ಮನವಿ ಮಾಡಿದ್ದೇನೆಂದೆರೆ, ನೀವು ಸೆಲೆಬ್ರಿಟಿ ಆಗಿದ್ದೀರಿ. ಅದು ಸಂತೋಷದ ವಿಚಾರ. ಒಮ್ಮೆ ಸುದ್ದಿಗೋಷ್ಠಿ ಕರೆದು ಅಭಿಮಾನಿಗಳಿಗೆ ಕಿವಿಮಾತು ಹೇಳಿ. ಅಷ್ಟೇ ನಮ್ಮ ಬೇಡಿಕೆ’ ಎಂದು ಸುಂದರ್ ರಾಜ್ ರೈ ಅವರು ಹೇಳಿದ್ದಾರೆ.
‘ಹಿಂದೂ ಸಂಸ್ಕೃತಿ ಮೇಲೆ, ಸ್ಥಳೀಯ ಸಂಸ್ಕೃತಿ ಮೇಲೆ ಬೇರೆ ಬೇರೆ ಕಾರಣಕ್ಕೆ ದಾಳಿ ಆಗುತ್ತಿದೆ. ಈಗಲೇ ಅದನ್ನು ನಿಯಂತ್ರಿಸುವುದು ಒಳ್ಳೆಯದು. ಹಾಗಾಗಿ ಇಂದೇ ನಾವು ಮೊದಲ ಕ್ರಮ ತೆಗೆದುಕೊಂಡಿದ್ದೇವೆ. ಈಗಾಗಲೇ ಧರ್ಮಸ್ಥಳದ ಬಗ್ಗೆ ಆಗುತ್ತಿದೆ. ಶಬರಿಮಲೆ ಬಗ್ಗೆ ಆಗಿದೆ. ಪೊಲೀಸ್ ಇಲಾಖೆಯವರು ಈಗಲೇ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು. ಅದಕ್ಕೆ ಇವರು ಮನವಿ ಮಾಡುವುದು ಒಳ್ಳೆಯದು’ ಎಂದಿದ್ದಾರೆ ಸುಂದರ್ ರಾಜ್ ರೈ.
ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮೇಲೆ ದೈವ ಬರುವುದು ನಿಜವಲ್ಲ ಎಂದು ಸುಂದರ್ ರಾಜ್ ರೈ ಹೇಳಿದ್ದಾರೆ. ‘ಅವರನ್ನು ಮೊದಲು ನನ್ನ ಬಳಿ ಕರೆದುಕೊಂಡು ಬನ್ನಿ. ಆ ರೀತಿ ಬರೋಕೆ ಸಾಧ್ಯವೇ ಇಲ್ಲ. ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸಂಬಂಧಪಟ್ಟ ವಿಚಾರ. ಅದನ್ನು ಬೆಂಗಳೂರಿಗೆ, ಮೈಸೂರಿಗೆ ತರಲು ನೋಡಿದರು. ಅದು ಯಶಸ್ವಿ ಆಗಲಿಲ್ಲ. ಯಾವುದೇ ಕಾರಣಕ್ಕೂ ಮೈಮೇಲೆ ಬರೋಕೆ ಸಾಧ್ಯವೇ ಇಲ್ಲ’ ಎಂದು ಸುಂದರ್ ರಾಜ್ ರೈ ಹೇಳಿದ್ದಾರೆ.