ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ನೋಡಿ ಸಾಕಷ್ಟು ಮಂದಿ ಮೈಮೇಲೆ ದೈವ ಅವಾಹನೆ ಆದವರಂತೆ ವರ್ತಿಸಿದ್ದರು. ಈ ಬಗ್ಗೆ ತುಳು ಒಕ್ಕೂಟ ರಿಷಬ್ ಶೆಟ್ಟಿ ಅವರಿಗೆ ಪತ್ರ ಬರೆದು ಘಟನೆ ಪುನರಾವರ್ತನೆ ಆಗದಂತೆ ಮನವಿ ಮಾಡಿತ್ತು. ಇದೀಗ ಕಾಂತಾರ ಸಿನಿಮಾ ತಂಡ ಈ ಬಗ್ಗೆ ಎಚ್ಚೆತ್ತುಕೊಂಡಿದೆ.
ಕಾಂತಾರ ಸಿನಿಮಾ ನೋಡಿ ಅತೀರೇಕದ ವರ್ತನೆ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನು ಚಿತ್ರತಂಡ ನೀಡಿದೆ. ಸೋಷಿಯಲ್ ಮೀಡಿಯಾ ಮೂಲಕ ಚಿತ್ರ ತಂಡ ಮನವಿ ಮಾಡಿಕೊಂಡಿದೆ.
ಚಿತ್ರತಂಡ ಹೇಳಿದ್ದೇನು..?
ಪ್ರೇಕ್ಷಕರೇ. ಅವಾಹನೆ ಮಾಡಿಕೊಳ್ಳುವುದನ್ನು ಬಿಡಿ
ಸಿನಿಪ್ರಿಯರೇ,
ದೈವಾರಾಧನೆ ತುಳುನಾಡಿನ ನಂಬಿಕೆಯ ಪ್ರತೀಕ. ಅದು ತುಳುವರ ಅಸ್ಮಿತೆ. ದೈವದ ಬಗೆಗಿನ ಅಪಾರ ಗೌರವ ಮತ್ತು ಅಚಲ ಶ್ರದ್ಧೆಗೆ ಕಿಂಚಿತ್ತೂ ಚ್ಯುತಿ ಬಾರದಂತೆ ದೈವಗಳ ಮಹಿಮೆಯನ್ನು ಸಾರುವ ಭಕ್ತಿಪೂರ್ವಕ ಕಥೆಯನ್ನು ನಾವು ಕಾಂತಾರ ಸಿನೆಮಾದಲ್ಲಿ ತೋರಿಸಿದ್ದೇವೆ. ತುಳು ಮಣ್ಣಿನ ಮಹತ್ವ ಹಾಗೂ ಪರಂಪರೆಯನ್ನು ಇಡೀ ಜಗತ್ತಿಗೆ ಸಾರುವಲ್ಲಿ ನಮ್ಮದ್ದಾದ ಕೊಡುಗೆಯನ್ನು ಕೊಟ್ಟಿದ್ದೇವೆ. ಆದರೆ ಕೆಲವರು ಸಿನೆಮಾದಲ್ಲಿ ಬರುವ ಪಾತ್ರಗಳನ್ನು ಅನುಕರಿಸಿ ಎಲ್ಲೆಂದರಲ್ಲಿ ಅನುಚಿತ ರೀತಿಯ ವರ್ತನೆಗಳನ್ನು ಮಾಡುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಇದು ನಮ್ಮ ನಂಬಿಕೆಗೆ ಮಾಡುವ ಅಪಚಾರವೂ ಹೌದು, ಅಕ್ಷಮ್ಯ ಅಪರಾಧವೂ ಹೌದು. ಇಂತಹ ವರ್ತನೆಗಳನ್ನು ನಾವು ಖಂಡಿತ ಸಹಿಸುವುದಿಲ್ಲ ಅದುದರಿಂದ ಚಿತ್ರಮಂದಿರ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಯಾರಾದರೂ ದೈವಗಳನ್ನು ಅನುಕರಣೆ ಮಾಡಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ