ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಾದ್ಯಂತ ಜೂನಿಯರ್ ರಾಜಕುಮಾರ್ ಪಾತ್ರದಲ್ಲಿ ಅಭಿನಯಿಸಿ ಡಾ. ರಾಜಕುಮಾರ್ ಅವರನ್ನು ನೆನಪಿಸುತ್ತಿದ್ದ ಗದಗ ತಾಲೂಕಿನ ಅಶೋಕ ಕಿರಟಗೇರಿ ಇಂದು ಅನಾರೋಗ್ಯದಿಂದ ಬಳಲುತ್ತಿದ್ದು, ಇದನ್ನು ಮನಗಂಡ ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘದ ಕಲಾವಿದರು ಹಾಗೂ ಶ್ರೀ ಗುರು ಪುಟ್ಟರಾಜ ಕಲಾಪೋಷಕ ಸಂಘದ ವತಿಯಿಂದ ಸಹಾಯ ಹಸ್ತವನ್ನು ನೀಡಿ ಗೌರವಿಸಿದರು.
ವರನಟ ಡಾ. ರಾಜ್‌ಕುಮಾರರ ಅಭಿನಯವನ್ನು ಚಾಚು ತಪ್ಪದೇ ಪಾಲಿಸುತ್ತಿದ್ದ ಅಶೋಕ ಕಿರಟಗೇರಿ ಅವರು ಇತ್ತೀಚೆಗೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಇದನ್ನು ಅರಿತ ಕಲಾವಿದರು ಮತ್ತೊಬ್ಬ ಕಲಾವಿದನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಕುಮಾರ ಮಂಡಲಗಿರಿ ನೇತೃತ್ವದ ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘದ ಕಲಾವಿದರು ಅಶೋಕ ಕಿರಟಗೇರಿ ಅವರಿಗೆ ಆರ್ಥಿಕ ಸಹಾಯ ಮಾಡಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಶ್ರೀ ಗುರು ಪುಟ್ಟರಾಜ ಕಲಾ ಪೋಷಕ ಸಂಘದ ಉಪಾಧ್ಯಕ್ಷ ನಜೀರ್ ಸಾಬ್ ಮಜ್ಜಗಿ ಮಾತನಾಡಿ, ಅಶೋಕ ಕಿರಟಗೇರಿ ಅವರು ಅದ್ಭುತ ಕಲಾಪ್ರತಿಭೆ. ಅವರು ಅನಾರೋಗ್ಯದಿಂದ ಬಳಲುತ್ತಿರುವುದು ಅತ್ಯಂತ ನೋವಿನ ಸಂಗತಿ. ಒಬ್ಬ ಕಲಾವಿದ ತೊಂದರೆಯಲ್ಲಿದ್ದಾಗ ಅವನಿಗೆ ಸಹಾಯ ಹಸ್ತ ಚಾಚುವುದು ಕಲಾಭಿಮಾನಿಗಳ ಗುಣ. ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘದ ಪ್ರತಿಯೊಬ್ಬರೂ ಬಡ ಕಲಾವಿದರು. ತಮ್ಮ ಬಡತನದಲ್ಲಿಯೂ ಮತ್ತೊಬ್ಬ ಕಲಾವಿದನ ಕಷ್ಟಕ್ಕೆ ಸ್ಪಂದಿಸಿ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ತೋರ್ಪಡಿಸಿದ್ದು ಸಂತೋಷದ ವಿಷಯ ಎಂದರು.