ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಯ್ ಕಾರ್ಯಕ್ರಮಕ್ಕೆ ಭೀಗ ಹಾಕಲಾಗಿದೆ. ಚಿತ್ರೀಕರಣ ಮಾಡಲಾಗುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ನಲ್ಲಿ ಮಾಲಿನ್ಯಕ್ಕೆ ಸಂಬಂಧಿಸಿದ ಕೆಲ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಈ ನಿರ್ಣಯ ಕೈಗೊಳ್ಳಲಾಗಿತ್ತು. ಇದರಿಂದಾಗಿ ಬಿಗ್ಬಾಸ್ ಶೋ ಬಂದ್ ಆಗಿ ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈ ಬಗ್ಗೆ ಜಾಲಿವುಡ್ ಸ್ಟುಡಿಯೋಸ್ನ ಮಾತೃ ಸಂಸ್ಥೆ ವೇಲ್ಸ್ ಸ್ಟುಡಿಯೋಸ್ನವರು ತಾತ್ಕಾಲಿಕ ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಇದೀಗ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳಿಗೆ ವೇಲ್ಸ್ ಸ್ಟುಡಿಯೋಸ್ನವರು ಪತ್ರ ಬರೆದಿದ್ದು, ನಾವು ಪರವಾನಗಿ ಪಡೆದು ಸ್ಟುಡಿಯೋ ನಡೆಸುತ್ತಿದ್ದೇವೆ. ನಮ್ಮ ಸ್ಟುಡಿಯೋನಲ್ಲಿನ ಎಲ್ಲ ಚಟುವಟಿಕೆಗಳಿಗೆ ಪರವಾನಗಿ ಇದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಯ ಕೆಲವು ನಿಯಮಗಳನ್ನು ನಾವು ಸರಿಯಾಗಿ ಪಾಲಿಸಿಲ್ಲ, ಈ ಬಗ್ಗೆ ನಾವು ವಿಷಾಧ ವ್ಯಕ್ತಪಡಿಸುತ್ತೇವೆ. ಇನ್ನು ಮುಂದೆ ನಾವು ಕೆಎಸ್ಪಿಬಿಯ ಎಲ್ಲ ನಿಯಮಗಳನ್ನು ಪಾಲಿಸುತ್ತೇವೆ, ಅದಕ್ಕೆ ಸಂಬಂಧಿಸಿರುವ ದಾಖಲೆಗಳನ್ನು ನಾವು ಕೆಎಸ್ಪಿಬಿಗೆ ಸಲ್ಲಿಕೆ ಮಾಡುತ್ತೇವೆ. ನಮಗೆ 15 ದಿನಗಳ ಕಾಲಾವಕಾಶ ನೀಡಿ ಅಷ್ಟರಲ್ಲಿ ಎಲ್ಲವನ್ನು ಸರಿಪಡಿಸುತ್ತೇವೆ, ಸದ್ಯಕ್ಕೆ ನಮಗೆ ತಾತ್ಕಾಲಿಕ ಅನುಮತಿಯನ್ನು ನೀಡಿ, ಆ ನಂತರ ಪರಿಶೀಲನೆ ನಡೆಸಿ ಅನುಮತಿಯನ್ನು ನವೀಕರಣಗೊಳಿಸಿ ಎಂದು ಪತ್ರದಲ್ಲಿ ವೇಲ್ಸ್ ಸ್ಟುಡಿಯೋ ಮನವಿ ಮಾಡಿಕೊಂಡಿತ್ತು. ಅದರಂತೆ ವೆಲ್ಸ್ ಸ್ಟುಡಿಯೋದ ಮನವಿಯನ್ನು ಮನ್ನಿಸಿರು ಜಿಲ್ಲಾಧಿಕಾರಿಗಳು ಹತ್ತು ದಿನಗಳ ಕಾಲಾವಕಾಶವನ್ನು ಸ್ಟುಡಿಯೋಗೆ ನೀಡಿದ್ದಾರೆ.
10 ದಿನ ಕಾಲಾವಕಾಶ ನೀಡಿರುವ ಕಾರಣಕ್ಕೆ ಇಂದೇ ಬಿಗ್ಬಾಸ್ ಶೋ ಮತ್ತೆ ಪ್ರಾರಂಭ ಆಗುವ ಸಾಧ್ಯತೆ ಇದೆ. ಸದ್ಯ ರೆಸಾರ್ಟ್ ನಲ್ಲಿರುವ ಎಲ್ಲಾ ಸ್ಪರ್ಧಿಗಳನ್ನು ಬಿಗ್ಬಾಸ್ ಮನೆಗೆ ಕರೆದುಕೊಂಡು ಬರುವ ನಿರೀಕ್ಷೆ ಇದೆ. ಇಂದು ರಾತ್ರಿ ಬಿಗ್ಬಾಸ್ ಎಂದಿನಂತೆ ಪ್ರಸಾರ ಆಗಲಿದೆ. ಈಗಾಗಲೇ ಶೋನ ಪ್ರೋಮೊಗಳು ಸಹ ಬಿಡುಗಡೆ ಆಗಿವೆ. ನಾಳೆಯ ಎಪಿಸೋಡ್ಗೂ ಕಂಟೆಂಟ್ ರೆಡಿ ಇದೆ ಎನ್ನಲಾಗುತ್ತಿದೆ.