ಧರ್ಮ ದುಂದುಭಿ ಲಿಂ. ಶ್ರೀ ವೀರಗಂಗಾಧರ ಜಗದ್ಗುರುಗಳು

0
Spread the love

ಭಾರತಾಂಬೆಯ ಪ್ರಕೃತಿ ಮಡಿಲಿನಲ್ಲಿ ಅನೇಕ ಪವಾಡಗಳು, ವಿಸ್ಮಯಗಳು ಕಾಲಕಾಲಕ್ಕೆ ಗೋಚರಿಸುತ್ತಾ ಬಂದಿವೆ. ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ಸಂತರು, ಅಘೋರಿಗಳು, ತಪಸ್ವಿಗಳು ಲೋಕಕಲ್ಯಾಣಾರ್ಥವಾಗಿ ಪೂಜಾ ಕೈಂಕರ್ಯಗಳು, ತಪೋನುಷ್ಠಾನಗಳನ್ನು ನಡೆಸಿಕೊಂಡು ಬಂದಿದ್ದು ನಮ್ಮ ಸನಾತನ ಹಿಂದೂ ಧರ್ಮದ ಒಂದು ವೈಶಿಷ್ಟ್ಯವಾಗಿದೆ. ಈ ದೇಶದಲ್ಲಿ ವೀರಶೈವ ಧರ್ಮವು ತನ್ನದೇ ಆದ ವಿಶಿಷ್ಟ ವಿಚಾರ ಧಾರೆ ಹಾಗೂ ಸಂಸ್ಕೃತಿ-ಸಂಸ್ಕಾರವನ್ನು ನೀಡಿ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ.

Advertisement

ವೀರಶೈವ ಧರ್ಮದ ಮೂಲ ಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಜಗತ್ತಿನ ಕಲ್ಯಾಣಕ್ಕಾಗಿ ಪರಶಿವನ ಪಂಚಮುಖಗಳಿಂದ ಆವಿರ್ಭವಿಸಿದವರು. ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ, ಶ್ರೀ ಕಾಶಿ ಪೀಠಗಳು ಶಿವಾದ್ವೈತ ಸಿದ್ಧಾಂತದ ಕೇಂದ್ರಗಳು. ಧರ್ಮ ರಕ್ಷಣೆಗಾಗಿ ಭಕ್ತ ಸಂಕುಲಕ್ಕೆ ಶಿವಜ್ಞಾನದ ಬೆಳಕು, ಆಚಾರ-ವಿಚಾರಗಳನ್ನು ಬೆಳೆಸುವ ಮಹಾತ್ಕಾರ್ಯ ಮಾಡುತ್ತಾ ಬಂದಿವೆ.

ನಾನೀಗ ಹೇಳಲು ಹೊರಟಿರುವುದು ವೀರಶೈವ ಧರ್ಮದ ಅಭಿನವ ಪರಮೇಶ್ವರರು, ಯುಗಪುರುಷರು, ಧರ್ಮ ದುಂದುಭಿ, ವೀರವಿರಾಗಿ ಲಿಂ. ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದ ಮಹಾಸನ್ನಿಧಿಯವರ ಕುರಿತು. ವಿಶ್ವಶಾಂತಿಗಾಗಿ, ನಾಡು-ನುಡಿ, ಸಂಸ್ಕೃತಿಗಾಗಿ ಹೋರಾಡಿದ ಪರಮ ವೈರಾಗಿಗಳು. ಬಾಲ್ಯದಲ್ಲಿಯೇ ವೀರಶೈವ ಧರ್ಮ, ಇಷ್ಟಲಿಂಗ ಮಹಾಪೂಜೆ, ಗುರುಪರಂಪರೆ, ಸಿದ್ಧಾಂತ ಶಿಖಾಮಣಿ ಗ್ರಂಥದ ಬಗ್ಗೆ ಅಪಾರ ಶ್ರದ್ಧಾ-ಭಕ್ತಿಯನ್ನು ಹೊಂದಿದವರಾಗಿದ್ದರು. ಕಾಲಾಂತರದಲ್ಲಿ ಶ್ರೀಗಳು ತಮ್ಮ ವಿದ್ಯಾಭ್ಯಾಸ ಹಾಗೂ ವೈದಿಕ ಸಂಸ್ಕಾರವನ್ನು ಮುಗಿಸಿಕೊಂಡು ಪಾಲಿಕೊಪ್ಪ ಹಿರೇಮಠದ ಪಟ್ಟಾಧಿಕಾರಕ್ಕೆ 1926ರಲ್ಲಿ ಭಾಜನರಾಗಿದ್ದರು.

ಹಾಗೆಯೇ 1931ರಲ್ಲಿ ಬೆಂಗಳೂರಿನ ವಿಭೂತಿಪುರ ಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಕಾಲಕ್ರಮೇಣ ಕುಂದಗೋಳ ತಾಲೂಕು ಹರಲಾಪೂರ ಗ್ರಾಮದವರ ಆಶಯದಂತೆ ಒಂದು ತಿಂಗಳ ಕಾಲ ಶ್ರೀಗಳು ಶಿವಲಿಂಗಪೂಜಾ ಅನುಷ್ಠಾನವನ್ನು ಕೈಗೊಂಡಿದ್ದರು. ನಂತರ ಧರ್ಮ ಪ್ರಚಾರಗೈಯುತ್ತ ಲಕ್ಷ್ಮೇಶ್ವರ ಬಳಿಯ ಮುಕ್ತಿಮಂದಿರ ಕ್ಷೇತ್ರಕ್ಕೆ ಬಂದು ಘೋರ ತಪಸ್ಸನ್ನು ಆಚರಿಸಿದರು. ಶ್ರೀಗಳ ತಪಸ್ಸಿನ ಫಲದಿಂದ ಭಕ್ತರು ಕಾಣಿಕೆಯಾಗಿ ಅಲ್ಲಿದ್ದ ಭೂಮಿಯನ್ನು ಮಠದ ಸ್ಥಾಪನೆಗೆ ದಾನವನ್ನಾಗಿ ನೀಡಿದರು. ಸಮಯ ಕಳೆದಂತೆ ಭಕ್ತರ ಸಹಾಯದಿಂದ ಮುಕ್ತಿಮಂದಿರವನ್ನು ಧರ್ಮಕ್ಷೇತ್ರವನ್ನು ಮಾಡಿ ಬಂದ ಭಕ್ತರಿಗೆ ಧರ್ಮಮಾರ್ಗವನ್ನು ಬೋಧಿಸುತ್ತಿದ್ದರು. ಮುಕ್ತಿಮಂದಿರದಲ್ಲಿ ಶ್ರೀ ರೇಣುಕಾಚಾರ್ಯರ, ಶಂಕರಾಚಾರ್ಯರ, ಮಧ್ವಾಚಾರ್ಯರ, ರಾಮಾನುಜಾಚಾರ್ಯರ, ಬುದ್ಧ, ಮಹಾವೀರ, ನಾನಕ, ಯೇಸು ಕ್ರಿಸ್ತ, ಪೈಗಂಬರ ಹೀಗೆ ಸರ್ವ ಧರ್ಮದವರ ಮೂರ್ತಿಯನ್ನು ಕೆತ್ತಿಸಿ ಸ್ಥಾಪಿಸಿ `ಮಾನವ ಧರ್ಮಕ್ಕೆ ಜಯವಾಗಲಿ – ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಧರ್ಮ ದುಂದುಭಿಯಾಗಿದ್ದಾರೆ.

ಶ್ರೀ ಜಗದ್ಗುರು ರಂಭಾಪುರಿ ಪೀಠದ ಜಗದ್ಗುರು ಶಿವಾನಂದ ಶಿವಾಚಾರ್ಯರ ಆಶಯದಂತೆ ಪಂಚಪೀಠದ ಶ್ರೀಮದ್ ರಂಭಾಪುರಿ ಮಹಾಪೀಠಕ್ಕೆ 119ನೇ ಪೀಠಾಧಿಪತಿಯಾಗಿ ಆಯ್ಕೆಯಾದರು. ಪಟ್ಟಾಧಿಕಾರದ ನಂತರ ಅನೇಕ ಧಾರ್ಮಿಕ, ಸಾಮಾಜಿಕ ಹಾಗೂ ಲೋಕಕಲ್ಯಾಣಾರ್ಥವಾಗಿ ಜಗತ್ತಿನ ಉದ್ದಗಲಕ್ಕೂ ಅವಿರತವಾಗಿ ಸಂಚರಿಸಿ ವೀರಶೈವ ಧರ್ಮ, ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ ಇದೆಲ್ಲದರ ಬಗ್ಗೆ ಜಾಗೃತಿ ಮೂಡಿಸುತ್ತ ಭಕ್ತರಿಗೆ ಆಶೀರ್ವಾದವನ್ನು ದಯಪಾಲಿಸುತ್ತಿದ್ದರು.

ಆಷಾಢ ಮಾಸವನ್ನು ಕೆಲವರು ನಿಷೇಧವೆಂದು ಬಿಂಬಿಸಿದ್ದರು, ಕೂಡ ಶ್ರೀಗಳವರು ಆಷಾಢ ಮಾಸದಲ್ಲೇ ಹರಿಹರ, ದಾವಣಗೆರೆ, ಬೆಂಗಳೂರು ಸೇರಿ ಹಲವು ಮಹಾನಗರಗಳಲ್ಲಿ ಇಷ್ಟಲಿಂಗ ಮಹಾಪೂಜೆ, ಧರ್ಮಜಾಗೃತಿ ಸಮಾರಂಭವನ್ನು ಕೈಗೊಂಡು ಆಷಾಢವನ್ನು ಶುಭಮಾಸವೆಂದು ತೋರಿದವರಾಗಿದ್ದಾರೆ. ಮೈಸೂರಿನ ರಾಜಮನೆತನ ದಸರಾ ಒಂದು ಕಡೆಯಾದರೆ, ರಂಭಾಪುರಿ ಪೀಠದ ಗುರುಮನೆ ದಸರಾ ಮತ್ತೊಂದು ವೈಭವದ ಸಂಕೇತ. ಈ ದಸರಾ ಮೂಲಕ ಪಂಚಪೀಠಗಳಲ್ಲಿ ವೈರಾಗ್ಯವೂ ಇದೆ, ವೈಭವವೂ ಇದೆ ಎಂಬ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದರು.

ಶ್ರೀ ಜಗದ್ಗುರು ಮಹಾ ಸನ್ನಿಧಿಯವರು ಲಿಂಗೈಕ್ಯರಾಗಿ 43 ವರ್ಷಗಳು ಕಳೆದಿವೆ. ಇವರ ಪುಣ್ಯಾರಾಧನೆಯನ್ನು ಕರ್ನಾಟಕದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಆಚರಿಸುತ್ತಾ ಬಂದಿರುವುದು ವೀರಶೈವರ ಪುಣ್ಯದ ಫಲವಾಗಿದೆ. ಶ್ರೀ ಜಗದ್ಗುರುಗಳ ಪುಣ್ಯಾರಾಧನೆಯನ್ನು ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಅ.9ರಂದು ಮುಂಜಾನೆ ಶ್ರೀ ಜಗದ್ಗುರುಗಳವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಮಧ್ಯಾಹ್ನ ಮಹಾ ಅನ್ನದಾಸೋಹ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಜಾಗೃತಿ ಸಮಾರಂಭವನ್ನು ಪ್ರಸ್ತುತ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರ ಅಭಿಪ್ರಾಯದಂತೆ ನಡೆಯುತ್ತಿದ್ದು, ಸರ್ವರೂ ಆಗಮಿಸಿ ಜಗದ್ಗುರುಗಳ ಕೃಪೆಗೆ ಪಾತ್ರರಾಗಿ.

ವಿನಾಯಕ ತೆಲಿಗಿಮಠ
ಹರಿಹರ.

 


Spread the love

LEAVE A REPLY

Please enter your comment!
Please enter your name here