ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ 2025–26ನೇ ಸಾಲಿಗೆ ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಬ್ರಾಹ್ಮಣ ಸಮುದಾಯದವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಮಾಜದ ಮುಖಂಡ ಗುರಣ್ಣ ಬಳಗಾನೂರ ವಿನಂತಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ನೇರವಾಗಿ ಸಾಲ ಹಾಗೂ ಸಹಾಯಧನವನ್ನು ಮಂಜೂರು ಮಾಡುವ ಉದ್ದೇಶ ಇದಾಗಿದೆ ಎಂದರು.
ಈ ಯೋಜನೆಯಡಿ ಹಸು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಇತ್ಯಾದಿ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಕನಿಷ್ಠ 1 ಲಕ್ಷದಿಂದ ಗರಿಷ್ಠ 2 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಬ್ರಾಹ್ಮಣ ಸಮುದಾಯದವರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀನಿವಾಸ ಹುಯಿಲಗೋಳ ಅರ್ಹತಾ ಮಾನದಂಡಗಳನ್ನು ವಿವರಿಸಿ, ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವವರು ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ್ದರೆ, ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ ಹೊಂದಿರಬೇಕು. ಅಲ್ಲದೆ, ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. 18ರಿಂದ 65 ವರ್ಷದೊಳಗಿನವರಾಗಿರಬೇಕು ಎಂದು ತಿಳಿಸಿದರು.
ಈ ಯೋಜನೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಹಾಗೂ ವಿಶೇಷ ಚೇತನರಿಗೆ ಶೇ. 5ರಷ್ಟು ಮೀಸಲಾತಿ ನೀಡಲಾಗಿದೆ. ಆಸಕ್ತರು ಅಕ್ಟೋಬರ್ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಡಿಎಸ್‌ಟಿ ಶಾಲೆಗೆ ಬಂದು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅನಿಲ್ ತಂಬದಮನಿ, ವೆಂಕಟೇಶ ಕುಲಕರ್ಣಿ, ಗಿರೀಶ ಕುಲಕರ್ಣಿ, ಕೃಷ್ಣ ಪೂಜಾರ, ಈರಣ್ಣ ಪೂಜಾರ, ಅರವಿಂದ ರಾಜಪುರೋಹಿತ, ಸಂತೋಷ ಪಾಟೀಲ ಮುಂತಾದವರು ಹಾಜರಿದ್ದರು.